

ಬೆಂಗಳೂರು: ‘‘ಭೈರಾದೇವಿ’ ಪ್ರೇಕ್ಷಕರಿಗೆ ಇಷ್ಟವಾದರೆ ಮಾತ್ರ ಇನ್ನೊಂದು ಸಿನಿಮಾ ಮಾಡುತ್ತೇನೆ. ಇಷ್ಟವಾಗಲಿಲ್ಲ ಎಂದರೆ ಚಿತ್ರರಂಗದಿಂದ ದೂರವಾಗುತ್ತೇನೆ. ಇದು ದೊಡ್ಡಮಟ್ಟದ ಯಶಸ್ಸಾಗುತ್ತದೆ ಎಂಬ ನಂಬಿಕೆಯಿದೆ’ ಎನ್ನುವ ಮೂಲಕ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ತಾವು ನಟಿಸಿ, ನಿರ್ಮಿಸಿರುವ ‘ಭೈರಾದೇವಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ೋಷಿಸಿ, ‘ನಿರ್ದೇಶಕ ಶ್ರೀ ಜೈ ಮನೆಗೆ ಬಂದು ಕಥೆ ಹೇಳಿದರು. ಕಥೆ ಇಷ್ಟವಾಗಿ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಸಿನಿಮಾ ಆರಂಭವಾದಾಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿವೆ. ಹಾಗಾಗಿ ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ-ಹೆಂಡತಿ ಹೇಳಿದ ಮಾತಿನ ಸ್ಫೂರ್ತಿಯಿಂದ ಚಿತ್ರವನ್ನು ಪೂರ್ಣಗೊಳಿಸಿದ್ದೇವೆ. ಇದೊಂದು ಕುಟುಂಬ ಸಮೇತ ನೋಡುವಂತಹ ಚಿತ್ರ’ ಎಂದರು. ರಮೇಶ್ ಅರವಿಂದ್, ‘ಈ ಚಿತ್ರದಲ್ಲಿ ನನ್ನದು ಅರವಿಂದ್ ಎನ್ನುವ ಪೊಲೀಸ್ ಅಧಿಕಾರಿ ಪಾತ್ರ. ಯಾವುದೇ ತರಹದ ರೌಡಿಗಳನ್ನು ಸದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ನನ್ನ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು’ ಎಂದರು. ಶ್ರೀ ಜೈ ಆ್ಯಕ್ಷನ್ ಕಟ್ ಹೇಳಿರುವ ‘ಭೈರಾದೇವಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್ ಜತೆ ಅನು ಪ್ರಭಾಕರ್, ರವಿ ಶಂಕರ್, ರಂಗಾಯಣ ರಘು ತಾರಾಬಳಗದಲ್ಲಿದ್ದಾರೆ. ಅ.3ರಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.