

ಶಿವಮೊಗ್ಗ: ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಮೆಟ್ರಿಕ್ ಟನ್ ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಶುಕ್ರವಾರ ಜಿಪಂ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ನೇತೃತ್ವದಲ್ಲಿ ಅಡಕೆ ಬೆಳೆಗಾರರು ತಾಲೂಕಿನ ಹೊಳೆಬೆನವಳ್ಳಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಈ ನಡೆಯಿಂದ ಅಡಕೆ ಬೆಳೆಗಾರರ ಬದುಕು ನೆಲಕಚ್ಚುವಂತಾಗಿದೆ. ಈಗಾಗಲೇ ಕೊಳೆ ರೋಗ, ಎಲೆಚುಕ್ಕಿ ರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲೇ ಕೇಂದ್ರ ಸರ್ಕಾರ ಬೇರೆ ದೇಶದಿಂದ ಅಡಕೆ ಆಮದು ಮಾಡಿಕೊಳ್ಳುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ರೈತರು ಕಿಡಿಕಾರಿದರು.
ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ರೈತರು ಅತಿ ಹೆಚ್ಚು ಅಡಕೆ ಬೆಳೆಯುತ್ತಾರೆ. ಆದರೆ ಬಿಜೆಪಿ ಸರ್ಕಾರ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಭೂತಾನ್‌ನಿಂದ 17000 ಮೆಟ್ರಿಕ್ ಟನ್ ಹಸಿ ಅಡಕೆ ತೆರಿಗೆ ಇಲ್ಲದೆ ಅಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ. ರೈತರು ಅತಿ ಹೆಚ್ಚು ನೀರು, ಗೊಬ್ಬರ ಪೋಷಕಾಂಶ ನಿರ್ವಹಣಾ ವೆಚ್ಚವನ್ನು ಮಾಡಿ ದೀರ್ಘಾವಧಿಯಲ್ಲಿ 6ರಿಂದ 8 ವರ್ಷ ಕಾದು ಬೆಳೆ ಪಡೆಯಬೇಕಾದ ಸ್ಥಿತಿಯಲ್ಲಿ ಅಡಕೆ ಬೆಳೆಗಾರರು ಇದ್ದಾರೆ. ಅಮದು ಅಡಕೆಯಿಂದ ಇಲ್ಲಿನ ರೈತರಿಗೆ ಬೆಲೆ ಕುಸಿತದ ಆತಂಕ ಶುರುವಾಗಿದೆ ಎಂದು ದೂರಿದರು.
ಅತಿಯಾದ ಮಳೆಯಿಂದ ಕೊಳೆ ರೋಗಕ್ಕೆ ತುತ್ತಾಗಿ ಖರ್ಚು ಮಾಡಿದ ಹಣ ಸಹ ಬರದಂತ ಸ್ಥಿತಿಯಲ್ಲಿ ಅಡಕೆ ಬೆಳೆಗಾರರಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಸ್ಥಿರವಾಗಿದ್ದು ಇಂತಹ ಸಂದರ್ಭದಲ್ಲಿ ರೈತರು ಅನಿವಾರ್ಯವಾಗಿ ಅಡಕೆ ಬೆಳೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏಕಾಏಕಿ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ರೈತರು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಗ್ರಾಪಂ ಪಿಡಿಒ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆರ್ ವಿಜಯಕುಮಾರ್ ಸಂತೆಕಡೂರು, ನಾಗರಾಜ್ ಸಿರಿಗೆರೆ, ಬಿ.ಯುವರಾಜ್, ಜ್ಯೋತಿ, ಎಸ್.ಅರುಣ್‌ಕುಮಾರ್, ವೆಂಕಟೇಶ್, ಎಚ್.ಸಿ.ಪ್ರಕಾಶ್, ಎಸ್.ಚಂದ್ರಪ್ಪ, ಡಿ.ಸುಬ್ರಹ್ಮಣಿ, ಕೆ.ಪೆರುಮಾಳ್, ಎಚ್.ಸಿ.ನೀಲಕಂಠಯ್ಯ, ಯತಿರಾಜ್, ನಾಗೇಶ್, ರಾಮನಾಯ್ಕ, ಎಚ್.ಎನ್.ಅಭಿಷೇಕ್, ಜಿ.ಎ.ಶಿವಪ್ಪ, ಎಚ್.ಟಿ.ಯೋಗೇಶ್, ಶರತ್, ಬಿ.ಎನ್.ಪ್ರಕಾಶ್, ಎಚ್.ಡಿ.ಬಸವರಾಜ್, ಪಿ.ಸರಳ, ಆರುಮುಗಂ, ಸತೀಶ್, ಎಸ್.ಎಚ್.ಕೋಟೇಶ್, ಕೆ.ರಮೇಶ್‌ನಾಯ್ಕ, ಬಿ.ಇ.ಮಹೇಶ್, ರಂಗಯ್ಯ, ಕೃಷ್ಣನಾಯ್ಕ, ಕೆ.ಎಂ.ರಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.