

ಶಿವಮೊಗ್ಗ: ಸಾರ್ವಜನಿಕ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಬುಧವಾರ ನಗರದಲ್ಲಿ ನಾಲ್ಕು ಭದ್ರಾ ಸಂಚಾರ ಗಸ್ತು ವಾಹನಗಳಿಗೆ ಚಾಲನೆ ನೀಡಲಾಯಿತು.
ಸಂಚಾರ ಗಸ್ತು ವಾಹನಗಳು ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್ಸ್, ವಾಕಿ-ಟಾಕಿ ಮತ್ತು ಇತರ ಉಪಕರಣ ಹೊಂದಿದ್ದು ವಾಹನಗಳಿಗೆ ಕರ್ತವ್ಯಕ್ಕೆ ನೇಮಿಸಲಾದ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಮತ್ತು ಉಪಕರಣಗಳ ಬಳಕೆ ಕುರಿತಂತೆ ತರಬೇತಿ ನೀಡಲಾಗಿದೆ.
ಭದ್ರಾ ಸಂಚಾರ ಗಸ್ತು ವಾಹನಗಳು ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಗಸ್ತು ಮಾಡಲಿದ್ದು ಸಿಬ್ಬಂದಿ ಅಪಘಾತ ನಡೆದ ಸ್ಥಳಕ್ಕೆ ತಕ್ಷಣ ಹೋಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಕೂಡಲೆ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಲಿವೆ. ಟ್ರಾಫಿಕ್ ಜಾಮ್ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ವಾಹನ ನಿಲುಗಡೆ ನಿಷೇಧ ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವುದು, ಶಾಲಾ ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಗಸ್ತು ಮಾಡಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಲಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಭದ್ರಾ ಸಂಚಾರ ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ ನೀಡಿದರು. ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಜಯಶ್ರೀ ಮಾನೆ, ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ಶೈಲಜಾ ಮತ್ತು ದೊಡ್ಡಮನಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.