

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ವಿಚಾರಣೆ ಎದುರಿಸಿದ್ದ ಮಹಿಳಾ ಉದ್ಯಮಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಳ್ಳೆಗಾಲ ಮೂಲದ ಹಾಗೂ ಎಲ್‌ಎಲ್‌ಬಿ ಪದವೀಧರೆ ಆರ್.ಜೀವಾ(೩೩) ಆತ್ಮಹತ್ಯೆಗೆ ಶರಣಾದ ದುದೈವಿ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ೫.೩೦ ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬ ಸದಸ್ಯರು ನೋಡಿದ್ದಾಗ ಘಟನೆ ಬೆಳಕಿಗೆ ಬಂದಿದೆ. ೧೧ ಪುಟಗಳ ಡೆತ್‌ನೋಟ್ ಕೂಡ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೀವಾ ವಿಚಾರಣೆ ನಡೆಸಿದ್ದ ಸಿಐಡಿ:
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಭೋವಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಜೀವಾ ಅವರ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ಜೀವಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಜೀವಾ ಅವರು ಗುರುವಾರ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿ ಮನೆಗೆ ವಾಪಾಸ್ ಆಗಿದ್ದರು. ಜೀವಾ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವುಡ್ ಮೆಟೀರಿಯಲ್ಸ್ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವುಡ್ ಮೆಟೀರಿಯಲ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನಸಿಕವಾಗಿ ನೊಂದಿದ್ದ ಜೀವಾ!
ಆತ್ಮಹತ್ಯೆಗೂ ಮುನ್ನ ಜೀವಾ ಅವರು ೧೧ ಪುಟಗಳ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಐಡಿ ಅಧಿಕಾರಿಗಳ ವಿರುದ್ಧವೇ ದೂರು:
ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಆತ್ಮಹತ್ಯೆಗೆ ಪ್ರಚೋಧನೆ ಮತ್ತು ಭ್ರಷ್ಟಚಾರ ತಡೆ ಕಾಯ್ದೆಯಡಿ ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಂಗೀತಾ ಅವರು ದೂರಿನಲ್ಲಿ ಸಿಐಡಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದು, ಹೀಗಾಗಿ ಸಿಐಡಿ ಅಧಿಕಾರಿಗಳನ್ನು ಆರೋಪಿಯನ್ನಾಗಿ ಮಾಡಿದ್ದೇವೆ. ಅಲ್ಲದೇ ಸಿಐಡಿ ಅವರು ಜೀವಾಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ.