

ತುಂಗಭದ್ರೆಯ ಒಂದು ತಟದಲ್ಲಿ ಮಂಚಾಲೆಯಿದ್ದರೆ ಕೆಲವೇ ಮೈಲಿಗಳ ದೂರದಲ್ಲಿ ಮತ್ತೊಂದು ಅಭಿಮುಖತಟದಲ್ಲಿ ಮಹಾಸಂನ್ಯಾಸಿಗಳು ಅಥವಾ ಯತಿವರೇಣ್ಯರಿದ್ದ ಭಿಕ್ಷಾಲಯ ಅಥವಾ ಬಿಚ್ಚಾಲೆಯಿದೆ. ರಸ್ತೆಮಾರ್ಗದಲ್ಲಿ ಹೋದರೆ ಆದೋನಿ ಮೂಲಕವಾಗಿ ಸರಿಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಷ್ಟೇ ಇದೆ ಈ ಭಿಕ್ಷಾಲಯ. ಅಪ್ಪಣಾಚಾರ್ಯರೆಂಬ ಮಹಾಗುರುಭಕ್ತರ ಕರೆಗೆ ಓಗೊಟ್ಟು ಶ್ರೀ ರಾಘವೇಂದ್ರತೀರ್ಥರೇ ಸ್ವಯಂ ಬಂದು ನೆಲೆಸಿದ ಏಕಶಿಲಾಬೃಂದಾವನವನ್ನಿಲ್ಲಿ ಕಾಣಬಹುದು.
ಈ ಗ್ರಾಮವನ್ನು ಭಿಕ್ಷಾಲಯ, ಬಿಚ್ಚಾಲೆ, ಎಲೆ ಬಿಚ್ಚಾಲೆ ಎಂದು ಕರೆಯಲೂ ಪ್ರಮುಖ ಕಾರಣವಿದೆ. ಹಿಂದೊಮ್ಮೆ ಶ್ರೀಮನ್ಮಧ್ವಾಚಾರ್ಯರ ಪೀಠದಲ್ಲಿ ವಿರಾಜಮಾನರಾಗಿದ್ದ ಶ್ರೀ ವಿಬುಧೇಂದ್ರತೀರ್ಥರೆಂಬ ಮಹಾತಪಸ್ವಿಗಳು ಇಲ್ಲಿಗೆ ಬಂದು ಇಲ್ಲಿಯೇ ತಪಸ್ಸನ್ನಾಚರಿಸಿದ್ದರೆಂದು ವಿದ್ವದ್ಪ್ರತೀತಿಯಿದೆ. ಮುಂದೆ ಅವರಂತೆಯೇ ತಪಸ್ವಿಗಳಾಗಿದ್ದ, ಎಲ್ಲ ಶ್ರೀಪಾದರಿಗೂ ತಪೋವಿದ್ಯಾವಿರಕ್ತ್ಯಾದಿಗಳಿಂದ ರಾಜರಂತಿದ್ದ ಶ್ರೀ ಲಕ್ಷಿ್ಮೕನಾರಾಯಣಮುನಿಗಳೆಂದೇ ಪ್ರಥಿತರಾಗಿದ್ದ ಶ್ರೀ ಶ್ರೀಪಾದರಾಜರು ಬಿಚ್ಚಾಲೆಗೆ ಬಂದು ಬಹುಕಾಲ ಇಲ್ಲಿ ನೆಲೆಸಿ ತಮ್ಮ ಆರಾಧ್ಯಮೂರ್ತಿ ಉಗ್ರನರಸಿಂಹನನ್ನು ಪ್ರತಿಷ್ಠಾಪಿಸಿದ್ದರು. ಅದರಂತೆ ಅವರ ಶಿಷ್ಯರೂ ಕರ್ನಾಟಸಿಂಹಾಸನಾಧೀಶ್ವರರೂ ಆಗಿದ್ದ ಶ್ರೀ ವ್ಯಾಸರಾಜಗುರುಸಾರ್ವಭೌಮರು ಇಲ್ಲಿಗೆ ಬಂದು ಶ್ರೀಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿದರು. ಇಷ್ಟೇ ಅಲ್ಲದೆ ವ್ಯಾಸರಾಜರು ಇಲ್ಲಿಗೆ ಬಂದಾಗ ಪೂಜಿಸುತ್ತಿದ್ದ, ತರುವಾಯ ಶ್ರೀರಾಯರಿಂದಲೂ ಅಪ್ಪಣಾಚಾರ್ಯರಿಂದಲೂ ಪೂಜಿತವಾಗಿದ್ದ ಕಂಚಿನ ಮುಖ್ಯಪ್ರಾಣದೇವರ ಉತ್ಸವಮೂರ್ತಿಯನ್ನೂ ಬಿಚ್ಚಾಲೆಯ ರಾಯರ ಪ್ರಥಮ ಶಾಖಾಬೃಂದಾವನದಲ್ಲಿ ಕಾಣಬಹುದಾಗಿದೆ. ಅಂತೆಯೇ ವ್ಯಾಸರಾಯರು ಮುಖ್ಯಪ್ರಾಣ-ನರಸಿಂಹರೆದುರು ಇಲ್ಲಿದ್ದಷ್ಟು ಕಾಲ ನಡೆಸುತ್ತಿದ್ದರೆನ್ನಲಾಗುವ ಅಖಂಡ ದೀಪಾರಾಧನೆಯ ಸಂಕೇತವಾಗಿ ಪ್ರಾಣದೇವರ ಗರ್ಭಗುಡಿಯಲ್ಲಿಂದು ನಂದದ ದೀಪವನ್ನು ಸದಾ ಕಾಣಬಹುದು.
ಹೀಗೆ ವಿಬುಧೇಂದ್ರರಾದಿಯಾಗಿ ಅನೇಕ ಭಿಕ್ಷುಗಳಲ್ಲದೆ ಪುರಂದರದಾಸರಾದಿಯಾಗಿ ಅನೇಕ ವಿರಾಗಿಗಳೂ ಬಂದಿದ್ದರ ಕುರುಹು ಇಲ್ಲಿ ಎದ್ದುಕಾಣುತ್ತದೆ. ಈ ಕಾರಣದಿಂದಲೇ ಇಂದಿಗೂ ಅಪ್ಪಣಾಚಾರ್ಯರ ಮನೆಯಲ್ಲಿ ರುಕ್ಮಿಣೀಸಮೇತ ಪಾಂಡುರಂಗವಿಠಲ ಹಾಗೂ ಮುಖ್ಯಪ್ರಾಣದೇವರ ಸುಂದರ ಪ್ರತಿಮೆಗಳು ಪೂಜೆಗೊಳ್ಳುತ್ತಿವೆ. ಗುರುರಾಯರು ಧರಿಸುತ್ತಿದ್ದ ಅವರ ಪಾದುಕೆಗಳು ಸಹ ಅಪ್ಪಣಾಚಾರ್ಯರ ಮನೆಯ ನೆಲದಡಿಯಲ್ಲಿ ಹುದುಗಿಸಲ್ಪಟ್ಟಿವೆಯೆಂಬುದಾಗಿ ಅವರ ವಂಶಸ್ಥರ ನಂಬುಗೆ. ಶ್ರೀ ಜಗನ್ನಾಥದಾಸರು ಅಪ್ಪಣಾಚಾರ್ಯರ ವಂಶಸ್ಥರಿಗೆ ನೀಡಿದ್ದರೆನ್ನಲಾಗುವ ಇಪ್ಪತ್ತು ಸೇರಿನ ‘ಅಕ್ಷಯಹಂಡೆ’ಯನ್ನೂ ಆಚಾರ್ಯರ ಮನೆಯಲ್ಲಿ ಕಾಣಬಹುದು.
ವಯಸ್ಸಿನಲ್ಲಿ ಅಪ್ಪಣಾಚಾರ್ಯರು ಗುರುರಾಯರಿಗಿಂತ ಕೊಂಚ ಹಿರಿಯರಾದರೂ ರಾಯರ ವಿದ್ವತ್ತು, ಸ್ಥಾನ, ತಪಸ್ಸುಗಳಿಗೆ ಬೆರಗಾಗಿದ್ದ ಅಪ್ಪಣಾಚಾರ್ಯರು ಅವರ ಶುಶ್ರೂಷೆಯಲ್ಲೇ ಬಹಳ ಕಾಲ ಕಳೆದು ರಾಯರ ಪರಿಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದರು. ಆಚಾರ್ಯರ ನಿಸ್ಸಾ್ವರ್ಥಸೇವೆಗೆ ಮನಸೋತಿದ್ದ ಗುರುರಾಜರು ತಮಗೆ ದಾನವಾಗಿ ಬಂದಿದ್ದ ‘ಕಲ್ಲಕುಂಟ್ಲ’ ಗ್ರಾಮವ್ಯಾಪ್ತಿಗೆ ಸೇರಿದ್ದ ಹನ್ನೆರಡು ಎಕರೆ ಭೂಮಿಯನ್ನು ಅಪ್ಪಣಾಚಾರ್ಯರಿಗೆ ಆಶೀರ್ವಾದಪೂರ್ವಕವಾಗಿ ನೀಡಲು ಮುಂದಾಗಿದ್ದರಂತೆ. ಆದರೆ ರಾಯರ ಅನುಗ್ರಹವನ್ನಷ್ಟೇ ಸದಾ ಬಯಸುತ್ತಿದ್ದ ಆಚಾರ್ಯರು ಅದನ್ನು ವಿನಮ್ರವಾಗಿಯೇ ಅಲ್ಲಗಳೆದಿದ್ದರಂತೆ. ಕೊನೆಗೆ ರಾಯರ ಒತ್ತಾಯಕ್ಕೆ ಮಣಿದು ಗುರುಗಳ ಪ್ರಸಾದರೂಪವಾದ ಆ ಸ್ವತ್ತನ್ನು ಸ್ವೀಕರಿಸಿದ್ದು ಇತ್ತೀಚೆಗಿನವರೆಗೂ ಅದು ಅವರ ವಂಶಸ್ಥರ ಬಳಿಯಲ್ಲೇ ಇತ್ತೆಂದು ಆಚಾರ್ಯರ ಕುಟುಂಬದವರ ಹೇಳಿಕೆ. ಹೀಗೆ ವಿಬುಧೇಂದ್ರಾದಿ ಅನೇಕ ಭಿಕ್ಷುಗಳು ಬಂದು ಪಾವನಗೊಳಿಸಿರುವ, ಇಂದಿಗೂ ತಪೋಭೂಮಿಯಂತೆ ಮೆರೆಯುತ್ತಿರುವ ಬಿಚ್ಚಾಲೆಯು ಅನ್ವರ್ಥಕವಾಗಿ ಭಿಕ್ಷುಗಳ ಆಲಯವೇ ಆಗಿದೆ.