

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು(ಡಿ.16) 100 ದಿನ ಪೂರೈಸಿದ್ದು, 'ನಮ್ಮ ಹೋರಾಟ ತಡೆಯಲು ಯಾರಿಂದಲೂ ಸಾಧ್ಯವಾಗದು' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಉದ್ದೇಶ ಹಾಗೂ ಇದುವರೆಗೆ ಸಾಗಿಬಂದ ಯಾತ್ರೆ ಕುರಿತ ದೃಶ್ಯಗಳ ತುಣಿಕ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ರಾಹುಲ್ ಗಾಂಧಿ, 'ನಿರುದ್ಯೋಗದ ವಿರುದ್ಧ, ಹಣದುಬ್ಬರದ ವಿರುದ್ಧ, ದ್ವೇಷದ ವಿರುದ್ಧ.. ನಮ್ಮ ಈ ತಪಸ್ಸನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಿಲ್ಲ, ನಿಲ್ಲಿಸಲು ಸಾಧ್ಯವಾಗುವುದಿಲ್ಲ!' ಎಂದು ಬರೆದುಕೊಂಡಿದ್ದಾರೆ.
ಸೆ.7ರಂದು ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳದಲ್ಲಿ ಸಿಕ್ಕಿದ ಸಿಹಿ ಅನುಭವಗಳ ಮೂಟೆಹೊತ್ತು ಸೆ.30ರಂದು ಕರ್ನಾಟಕಕ್ಕೆ ಆಗಮಿಸಿತ್ತು. ನಂತರ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ ಮೂಲಕ ಸಾಗಿರುವ ಯಾತ್ರೆಯು ಸದ್ಯ ರಾಜಸ್ತಾನದಲ್ಲಿ ಸಾಗುತ್ತಿದೆ. ಇಂದು(ಶುಕ್ರವಾರ) ಸಂಜೆ 7ಕ್ಕೆ ಯಾತ್ರೆಯ ಶತದಿನೋತ್ಸವ ಆಚರಿಸಲಾಗುತ್ತೆ. ಇದಕ್ಕೂ ಮುನ್ನ ಸಂಜೆ 4ಕ್ಕೆ ಜೈಪುರದ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಭದ್ರತೆಯ ಬೇಲಿ ದಾಟಿ ಪ್ರೀತಿಯಿಂದ ಹೆಜ್ಜೆ ಹಾಕುತ್ತಿರುವ ರಾಹುಲ್ ಯಾತ್ರೆಗೆ ದಾರಿಯುದ್ದಕ್ಕೂ ಅದ್ದೂರಿ ಸ್ವಾಗತ, ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ನೂರು ದಿನದ ಯಾತ್ರೆಯು ದೌಸಾದ ಮೀನಾ ಹೈಕೋರ್ಟ್ ಮುಂಭಾಗದಿಂದ ಶುರುವಾಗಿದೆ. ಇದುವರೆಗೆ ಯಾತ್ರೆಯು ಒಟ್ಟು ಸುಮಾರು 2,600 ಕಿ.ಮೀ. ದೂರ ಕ್ರಮಿಸಿದೆ. ಡಿ.24ರಂದು ದೆಹಲಿ ತಲುಪಲಿದ್ದು, ಅಂತಿಮವಾಗಿ ಜಮ್ಮು-ಕಾಶ್ಮೀರದತ್ತ ಪ್ರಯಾಣ ಬೆಳೆಸಲಿದೆ.