ಕರ್ನಾಟಕ ದಾಟಿ ತೆಲಂಗಾಣ ಪ್ರವೇಶಿಸಿದ ಜೋಡೋ ಯಾತ್ರೆ: ಗಡಿಯಲ್ಲಿ ಬೀಳ್ಕೊಟ್ಟ ರಾಜ್ಯದ ನಾಯಕರು

Congress
ತೆಲಂಗಾಣಕ್ಕೆ ಐಕ್ಯತಾ ಯಾತ್ರೆ ಪ್ರವೇಶ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಅಲ್ಲಿನ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು.
Published on

| ಶ್ರೀಕಾಂತ್ ಶೇಷಾದ್ರಿ ಯರಮರಸ್ (ರಾಯಚೂರು)

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 21 ದಿನಗಳ ಪಾದಯಾತ್ರೆ ಪೂರ್ಣಗೊಂಡಿದ್ದು, ಮುಂಜಾನೆ ತೆಲಂಗಾಣ ಪ್ರವೇಶಿಸಿತು. ಯರಮರಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಧ್ವಜವನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನುಮೂಲ ರೇವಂತ್ ರೆಡ್ಡಿ ಅವರಿಗೆ ಹಸ್ತಾಂತರಿಸಿ ಯಾತ್ರೆಗೆ ಬೀಳ್ಕೊಟ್ಟರು. ತೆಲಂಗಾಣದಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಸಮೂಹ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಸ್ವಾಗತ ಕೋರಿತು.

ಚಾಮರಾಜನಗರದ ಬಂಡೀಪುರ ಅರಣ್ಯದ ಹೊರವಲಯದಿಂದ ಆರಂಭಿಸಿದ ರಾಜ್ಯದಲ್ಲಿನ ಭಾರತ ಜೋಡೋ ಯಾತ್ರೆಯು ಸಾಂಸ್ಕೃತಿಕ ರಾಜಧಾನಿ ಮೈಸೂರು ಮೂಲಕ ಸಾಗಿ, ಕಾವೇರಿ, ತುಂಗಭದ್ರಾ, ಕೃಷ್ಣಾ ನದಿಗಳನ್ನು ದಾಟುತ್ತಾ ರಾಯಚೂರಿನ ಹತ್ತಿ ಗದ್ದೆಗಳ ಬಳಿ ಕರ್ನಾಟಕದಲ್ಲಿ ಸುದೀರ್ಘ 22ನೇ ದಿನದಂದು ತನ್ನ ಪಯಣವನ್ನು ಪೂರ್ಣಗೊಳಿಸಿತು. ರಾಹುಲ್ ಯಾತ್ರೆಯ ಉದ್ದಕ್ಕೂ ಅನೇಕರ ಜತೆ ಸಂವಾದ ನಡೆಸುವ ಮೂಲಕ ನೋವಿಗೆ ಕಿವಿಯಾದರು. ಕರ್ನಾಟಕದ ಜನರು ಯಾತ್ರೆಗೆ ಅಭೂತಪೂರ್ವ ಬೆಂಬಲ ನೀಡಿ ಸ್ಪಂದಿಸಿದ್ದಾರೆ. ಅದಕ್ಕಾಗಿ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ, ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂದು ಗುರು ಬಸವಣ್ಣನವರು ಹೇಳಿದ್ದರು. ಕರ್ನಾಟಕದಲ್ಲಿ ಅವರ ಬೋಧನೆಗಳಿಗೆ ತದ್ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ. ಯಾತ್ರೆಯು ಕರ್ನಾಟಕದ ಮೂಲಕ ಸಾಗುವ ವೇಳೆ, ಇಲ್ಲಿನ ಜನರ ಅಪರಿಮಿತ ಸಾಮರ್ಥ್ಯವನ್ನು ದುರ್ಬಲಗೊಳಿಸಲಾಗುತ್ತಿದೆ ಎನ್ನುವುದು ಸ್ಪಷ್ಟವಾಯಿತು. ವಿವಿಧ ಬೆಳೆ ಬೆಳೆಯುವ ಪ್ರತಿಯೊಂದು ಪ್ರದೇಶದ ರೈತರೂ ಹೆಚ್ಚುತ್ತಿರುವ ವೆಚ್ಚಗಳು, ಅನಿಶ್ಚಿತ ಇಳುವರಿ ಹಾಗೂ ಬೆಲೆ ಏರಿಳಿತದಿಂದ ತಮ್ಮ ಕುಟುಂಬಗಳನ್ನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ ಎಂಬುದು ತಮ್ಮ ಅರಿವೆಗೆ ಬಂತು ಎಂದಿದ್ದಾರೆ.

ರಮ್ಯಾ ಅಸಮಾಧಾನ: ರಾಹುಲ್ ಯಾತ್ರೆಯಲ್ಲಿ ಶನಿವಾರ ಭಾಗವಹಿಸಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ರಾಯಚೂರಿನ ಕಾರ್ನರ್ ಮೀಟಿಂಗ್​ನಲ್ಲಿ ವೇದಿಕೆ ಮೇಲೆ ಅವಕಾಶ ಸಿಗದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅತಿಥಿಗಳ ಪಟ್ಟಿಯಲ್ಲಿ ರಮ್ಯಾ ಹೆಸರು ಇಲ್ಲದೇ ಇರುವುದರಿಂದ ಅವರಿಗೆ ವೇದಿಕೆ ಮೇಲೆ ಅವಕಾಶ ಸಿಕ್ಕಿಲ್ಲವೆನ್ನಲಾಗಿದೆ.

ಅಧಿಕಾರಕ್ಕೆ ಬರುವ ವಿಶ್ವಾಸ!: ಶಾಂತಿಯ ತೋಟವಾದ ಕರ್ನಾಟಕವನ್ನು ಬಿಜೆಪಿಯ ದ್ವೇಷ, ದುರಾಡಳಿತದ ಪ್ರಯೋಗಾಲಯವನ್ನಾಗಿ ಮಾಡಲು ಕಾಂಗ್ರೆಸ್​ಪಕ್ಷ ಎಂದಿಗೂ ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ನಮ್ಮ ರಾಜ್ಯ ನಾಯಕರು, ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಕೋಟ್ಯಂತರ ಕನ್ನಡಿಗರ ಬೆಂಬಲದಿಂದ, ಅವಿರತ ಪ್ರಯತ್ನಗಳ ಮೂಲಕ ಪ್ರೀತಿ, ಶಾಂತಿ, ಸೌಹಾರ್ದತೆಯ ಹಾದಿಯಲ್ಲಿ ರಾಜ್ಯದ ನಿಜವಾದ ಸಾಮರ್ಥ್ಯವನ್ನು ನಾವು ಅನಾವರಣಗೊಳಿಸುವ ದಿನಗಳು ಶೀಘ್ರದಲ್ಲೇ ಬರಲಿವೆ ಎಂದು ರಾಹುಲ್ ಪರೋಕ್ಷವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾತ್ರೆ ಮುಗಿದಿರಬಹುದು ಹೋರಾಟ ಮುಂದುವರಿಯಲಿದೆ: ಸಮಾಜ ಒಡೆಯುವ ಮೂಲಕವೇ ರಾಜಕೀಯ ಗೆಲುವನ್ನು ಪಡೆಯುತ್ತಾ ಬಂದ ಬಿಜೆಪಿಯ ವಿಚ್ಛಿದ್ರಕಾರಿ ಅಜೆಂಡಾಕ್ಕೆ ಪ್ರತಿಯಾಗಿ ಸಮಾಜವನ್ನು ಕೂಡಿ ಕಟ್ಟಬೇಕೆಂಬ ಸಂಕಲ್ಪದಿಂದ ಭಾರತ ಜೋಡೊ ಯಾತ್ರೆ ಕೈಗೊಡಿರುವ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಆಭಾರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ವಾಧಿಕಾರ, ದುರಾಡಳಿತ, ಕೋಮು ಧ್ರುವೀಕರಣದ ಅಜೆಂಡಾ ವಿರುದ್ಧದ ಹೋರಾಟಕ್ಕೆ ಭಾರತ ಐಕ್ಯತಾ ಯಾತ್ರೆ ಸ್ಪೂರ್ತಿ ಕೊಟ್ಟಿದೆ. ನಮ್ಮ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಜನಮನವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಕರ್ನಾಟಕದಿಂದ ನಿರ್ಗಮಿಸಿರಬಹುದು. ಆದರೆ ಯಾತ್ರೆ ಮೂಡಿಸಿದ ಜಾಗೃತಿ, ಹುಟ್ಟಿಸಿದ ಭರವಸೆ ಮತ್ತು ಸಾರಿದ ಐಕ್ಯತೆಯ ಸಂದೇಶದಿಂದ ಪ್ರೇರಣೆ ಪಡೆದ ಪ್ರಜಾಪ್ರಭುತ್ವದ ರಕ್ಷಣೆಯ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net