ಸಿನಿಮಾಗಳನ್ನು ಗೆಲ್ಲಿಸಲು, ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರಲು ಚಿತ್ರತಂಡಗಳು ಸಾಕಷ್ಟು ಪ್ರಚಾರ, ಪ್ರಯತ್ನಗಳನ್ನು ಮಾಡುತ್ತವೆ. ಇನ್ನು ಇತ್ತೀಚಿನ ಬೆಳವಣಿಗೆ ಎಂದರೆ, ವಿಶೇಷ ಪ್ರೀಮಿಯರ್, ಟಿಕೆಟ್ ಲಕ್ಕಿ ಡಿಪ್ ಹೀಗೆ ನಾನಾ ಪ್ರಯತ್ನಗಳನ್ನು ನೋಡಿದ್ದೇವೆ. ಹೀಗಿರುವಾಗ ಹಿಂದಿಯ ಎರಡು ಸಿನಿಮಾಗಳು ಒಂದು ಟಿಕೆಟ್ ಕೊಂಡರೆ, ಮತ್ತೊಂದು ಟಿಕೆಟ್ ಉಚಿತ ವಿಶೇಷ ಆಫರ್ ನೀಡಿ ವಿಭಿನ್ನ ಪ್ರಚಾರಕ್ಕೆ ನಿಂತಿವೆ. ಹೌದು, ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಮತ್ತು ಮನೋಜ್ ಬಾಜಪೈ ‘ಗವರ್ನರ್’ ಚಿತ್ರಗಳು ಈ ಹೊಸ ಆಫರ್ ನೀಡಿವೆ. ರಾಷ್ಟ್ರದ ವಿಚಾರದ ಕುರಿತು ಬೆಳಕು ಚೆಲ್ಲುವ ಸಿನಿಮಾಗಳಾಗಿದ್ದು, ಕುಟುಂಬ ಸಮೇತರಾಗಿ ಸಿನಿಮಾ ನೋಡಬೇಕು ಎಂಬ ಉದ್ದೇಶಕ್ಕೆ ಈ ಆಫರ್ ನೀಡಲಾಗಿದೆ ಎಂದು ಚಿತ್ರತಂಡಗಳು ಹೇಳಿಕೊಂಡಿವೆ. ಇದೇ ಜೂ.5ರಂದು ಬಿಡುಗಡೆಯಾದ ಸಂಸದೆ, ನಟಿ ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತ’ 2008ರ ನ. 26ರಂದು ಮುಂಬೈ ಭಯೋತ್ಪಾದಕರ ದಾಳಿ ವೇಳೆ ಆಸ್ಪತ್ರೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಈ ಸಿನಿಮಾ ಸುತ್ತುತ್ತದೆ. 15 ನರ್ಸ್‌ಗಳು ಪ್ರಾಣಾಪಾಯ ಲೆಕ್ಕಿಸದೆ 400 ಜನರನ್ನು ರಕ್ಷಿಸಿದ ಸಾಹಸಮಯ ಕಥೆ ಇದಾಗಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ‘ಭಾರತ್ ಭಾಗ್ಯ ವಿಧಾತ’ ಅಷ್ಟೊಂದು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಆದರೂ ಕೈಚೆಲ್ಲದ ಚಿತ್ರತಂಡ ದೇಶಭಕ್ತಿ ಸಾರುವ ಈ ಚಿತ್ರವನ್ನು ಪ್ರತಿಯೊಬ್ಬರು ವೀಕ್ಷಿಸಲೇಬೇಕು ಎಂಬ ಕಾರಣಕ್ಕೆ ಇಡೀ ದೇಶಾದ್ಯಂತ ಅಫರ್ ಘೋಷಿಸಿದೆ. ಪ್ರೇಕ್ಷಕರು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವಾಗ ‘ಭಾರತ್’ ಎಂಬ ಕೋಡ್ ಬಳಸಿದರೆ ಮಾತ್ರ ಈ ಆರ್ ಸಿಗಲಿದೆ. ಇನ್ನು ಹರಿಯಾಣ ಸಿಎಂ ಸಿಎಂ ನಯ್ಯಬ್ ಸಿಂಗ್ ಸೈನಿ ‘ಭಾರತ್ ಭಾಗ್ಯ ವಿಧಾತ’ ವೀಕ್ಷಿಸಿ, ಹರಿಯಾಣದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. -ಏಜೆನ್ಸೀಸ್