

ಬೆಂಗಳೂರು: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ ಅಲ್ಲಲ್ಲಿ ರೈತರ ಪ್ರತಿಭಟನೆಗಳ ಮೂಲಕ ಆರಂಭವಾಗಿದೆ. ಕರ್ನಾಟಕ ಸೇರಿದಂತೆ ಬಹುತೇಕ ಭಾಗಗಳಲ್ಲಿ ನಸುಕಿನ ಜಾವದಲ್ಲೇ ಪ್ರತಿಭಟನೆಗೆ ಧುಮುಕುವ ಮೂಲಕ ಭಾರತ್ ಬಂದ್ ಯಶಸ್ವಿಗೊಳಿಸಲು ರೈತರು ಮುಂದಾಗಿದ್ದಾರೆ.
ಕೆಲವೆಡೆ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಜನಜೀವನ ಎಂದಿನಂತೆಯೇ ಆರಂಭವಾಗಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ಸಹಜವಾಗಿಯೇ ಇದೆ. ಮೆಜಿಸ್ಟಿಕ್ನಲ್ಲೂ ಪ್ರಯಾಣಿಕರ ಸಂಖ್ಯೆ ಸಾಮಾನ್ಯವಾಗಿಯೇ ಇದೆ. ಕೆ.ಆರ್. ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟು ನಡೆಯುತ್ತಿದೆ. ರಾಜ್ಯದ ಹಲವೆಡೆಯು ಪ್ರತಿಭಟನೆಗಳು ನಡೆಯುತ್ತಿದ್ದು, ಜನಜೀವನ ಎಂದಿನಂತೆಯೇ ಆರಂಭವಾಗಿದೆ. ಆದರೆ, ಬಂದ್ನ ಸ್ಪಷ್ಟ ಚಿತ್ರಣ 10 ಗಂಟೆಯ ಬಳಿಕ ಸಿಗಲಿದೆ.
10 ಗಂಟೆಯ ಬಳಿಕ ಎಲ್ಲ ರೈತ ಸಂಘಟನೆಗಳು ಬೀದಿಗಿಳಿದು ಕೇಂದ್ರ ಸರ್ಕಾರದ ನೂತನ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲಿವೆ. ರಾಜ್ಯದಲ್ಲೂ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಇಂದು ಜನಜೀವನ ವ್ಯತ್ಯಯವಾಗುವ ಸಾಧ್ಯತೆ ಇದೆ. ರೈತ ಸಂಘಟನೆಗಳು ಕರೆ ನೀಡಿರುವ ಕಾರಣ ಹಲವಾರು ಸಂಘಟನೆಗಳು ಬಂದ್ಗೆ ಕೈಜೋಡಿಸಿದ್ದು, ಹರಿಯಾಣ ಮತ್ತು ಪಂಜಾಬ್ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ರಾಜ್ಯದಲ್ಲೂ ಪ್ರತಿಧ್ವನಿಸಲಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಬಂದ್ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ನಡುವೆಯೇ ಭಾರತ್ ಬಂದ್ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸಲು ರೈತ ಸಂಘಟನೆಗಳು ಸಜ್ಜಾಗಿವೆ. ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ರಾಜ್ಯವ್ಯಾಪಿ ಬಂದ್ ನಡೆಸಲು ಕರೆ ನೀಡಿದ್ದಾರೆ.