

ನವದೆಹಲಿ: ಸೋಮವಾರ ರೈತರನ್ನು ಭೇಟಿ ಮಾಡಿ ಬಂದಾಗಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೃಹ ಬಂಧನದಲ್ಲಿ ಇಡಲಾಗಿದ್ದು, ಮತ್ತೆ ರೈತರನ್ನು ಭೇಟಿ ಮಾಡದಂತೆ ಬಲವಂತವಾಗಿ ಹಿಡಿದಿಡಲಾಗಿದೆ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷ ಆರೋಪಿಸಿದ್ದು, ದೆಹಲಿ ಪೊಲೀಸರು ಆರೋಪವನ್ನು ಅಲ್ಲಗೆಳೆದಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಭಾರತ್ ಬಂದ್ಗೆ ಕರೆ ನೀಡಿದ್ದು, ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿ ಕೇಜ್ರಿವಾಲ್ರನ್ನು ಬಂಧಿಸಿಡಲಾಗಿದೆ ಎಂದು ಆಪ್ ಆರೋಪಿಸಿದೆ.
ಕೇಂದ್ರ ಗೃಹ ಸಚಿವಾಲಯ ನೀಡಿರುವ ಆದೇಶದ ಮೇರೆಗೆ ದೆಹಲಿ ಪೊಲೀಸರು ನಗರದ ಮೂವರು ಮೇಯರ್ಗಳು ಕರೆತಂದು ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ಮಾಡಿಸಿ, ಅದೇ ಸಮಯದಲ್ಲಿ ಸಿಎಂ ನಿವಾಸ ನಿರ್ಗಮನ ದ್ವಾರಗಳನ್ನು ಮುಚ್ಚಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಸಿಎಂ ನಿವಾಸ ಸಂಪೂರ್ಣ ಬ್ಯಾರಿಕೇಡ್ಗಳಿಂದ ಸುತ್ತುವರಿದಿದ್ದು, ಮನೆಯ ಆವರಣದ ಒಳಗೆ ಯಾರು ಪ್ರವೇಶದಂತೆ ನಿರ್ಭಂದಿಸಲಾಗಿದೆ ಎಂದು ಆಪ್ ಆರೋಪಿಸಿದೆ.
ಸಿಎಂ ನಿರ್ಬಂಧದಿಂದಾಗಿ ಇಂದಿನ ಎಲ್ಲ ಅಧಿಕೃತ ಸಭೆಗಳು ರದ್ದಾಗಿವೆ ಎಂದು ಆಪ್ ನಾಯಕರು ಆರೋಪಿಸಿದರೆ, ಆಪ್ ಮಾಡುತ್ತಿರುವ ಆರೋಪ ಆಧಾರರಹಿತ ಮತ್ತು ಸುಳ್ಳುಗಳಿಂದ ಕೂಡಿದೆ. ಸಿಎಂ ಮನೆಯನ್ನು ನಿರ್ಬಂಧಿಸಲಾಗಿಲ್ಲ. ಎಲ್ಲವೂ ಆರಾಮಾಗಿ ಇದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಅಂಟೋ ಅಲ್ಫೋನ್ಸ್ ಆರೋಪವನ್ನು ಅಲ್ಲಗೆಳೆದಿದ್ದಾರೆ.
ನಿನ್ನೆಯಷ್ಟೇ ಕೇಜ್ರಿವಾಲ್ ಅವರು ದೆಹಲಿ ಮತ್ತು ಹರಿಯಾಣ ನಡುವೆ ಇರುವ ಸಿಂಘು ಗಡಿಗೆ ಭೇಟಿ ನೀಡಿ ಪ್ರತಿಭಟನಾ ರೈತರನ್ನು ಮಾತನಾಡಿಸಿ, ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದ್ದರು. ಇಂದು ಸಹ ಅವರು ರೈತರ ಭೇಟಿಗೆ ತೆರಳಬೇಕಿತ್ತು. ಇದರ ಬೆನ್ನಲ್ಲೇ ಆಪ್ ಪಕ್ಷ ಗಂಭೀರ ಆರೋಪ ಮಾಡಿದೆ. (ಏಜೆನ್ಸೀಸ್)