

ಶಿವಮೊಗ್ಗ: ಎಲ್ಲ ಸದ್ಗುಣಗಳನ್ನು ಅಳವಿಡಿಸಿಕೊಂಡಿದ್ದ ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಕೊಂಡಿದ್ದರು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ಮತ್ತೂರಿನಲ್ಲಿ ಸೋಮವಾರ ಭಾನುಪ್ರಕಾಶ್ ಅವರ ಮೊದಲ ವರ್ಷದ ಸಂಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಭಾನುಜೀ ನೆನಪಿನ ಪ್ರಕಾಶದಲ್ಲಿ ಒಂದು ವರ್ಷ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿದ ಅವರು, ಈಗ ಭಾನುಜೀ ಅವರ ಮಕ್ಕಳೂ ಸಮಾಜ ಸೇವೆ, ಸಂಘಟನೆಯಲ್ಲಿ ತೊಡಗಿಸಿಕೊಂಡು ತಂದೆಯ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಚುನಾಯಿತ ಪ್ರತಿನಿಧಿಗಳು ಎಂದೂ ಪಕ್ಷವನ್ನು ಮರೆಯಬಾರದು ಎಂಬ ಅವರ ಮಾತುಗಳನ್ನು ನಾನು ಒಪ್ಪಿಕೊಂಡು ಅದರಂತೆಯೇ ಕಾರ್ಯನಿರ್ವಹಿಸುತ್ತಿದ್ದೇನೆ. ಸದಾ ಅಧ್ಯಯನಶೀಲರಾಗಿದ್ದ ಅವರು ನಿಷ್ಠುರವಾಗಿ ಮಾತನಾಡುತ್ತಿದ್ದರು. ನಿಷ್ಠುರವಾಗಿ ಮಾತನಾಡಬಲ್ಲ ವ್ಯಕ್ತಿತ್ವವನ್ನು ಅವರು ಬೆಳೆಸಿಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.
ಬಿ.ಎಸ್.ಯಡಿಯೂರಪ್ಪ ಹಾಗೂ ಭಾನುಪ್ರಕಾಶ್ ಅವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದಾಗ ಸಂಘಟನೆ ದೃಷ್ಟಿಯಿಂದ ಭಾನುಜೀ ಹೇಳಿದ್ದ ಮಾತುಗಳು ಸರಿ ಎಂದು ನನಗೆ ಮನದಟ್ಟಾಗುವ ವೇಳೆಗೆ ಸಾಕಷ್ಟು ಸಮಯವಾಗಿತ್ತು. ಸಂಘಟನೆಗೆ ಇನ್ನೂ ಬಹಳ ವರ್ಷ ಅವರ ಅವಶ್ಯಕತೆಯಿತ್ತು. ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ನಿರಂತರವಾಗಿ ಬೇಕಿತ್ತು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಸಂಘಟನೆಯನ್ನು ಕೊಂಡೊಯ್ಯುವ ಮೂಲಕ ಅವರ ಆಶಯಗಳನ್ನು ಈಡೇರಿಸುವ ಸಂಘಟನೆಯನ್ನು ಇನ್ನಷ್ಟು ಜನಪರವಾಗಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.
ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಪಕ್ಷದ ವಿವಿಧ ಸ್ತರಗಳ ಪ್ರಮುಖರು, ಭಾನುಪ್ರಕಾಶ್ ಕುಟುಂಬದವರು, ಮತ್ತೂರು ಹಾಗೂ ಸುತ್ತಮುತ್ತಲ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.ಮೊದಲ ವರ್ಷದ ಸಂಸ್ಮರಣೆ ಅಂಗವಾಗಿ ಗಣ್ಯರು ಸಸಿ ನೆಟ್ಟರು.