

ಅಲ್ಲಮನು ಕಲ್ಯಾಣಕ್ಕೆ ಬಂದು ‘ಇಷ್ಟಲಿಂಗದ ಭಕ್ತಿಮಾರ್ಗ’ ವನ್ನು ಎಲ್ಲರಿಗೂ ತೋರಿಸಿದನೆಂದು ಚಾಮರಸ ತನ್ನ ‘ಪ್ರಭುಲಿಂಗ ಲೀಲೆ’ಯಲ್ಲಿ ಹೇಳುತ್ತಾನೆ. ಇದು ನಿಜ. ನಾವು ‘ಇಷ್ಟಲಿಂಗ’ದ ಪೂರ್ವಾಪರಗಳನ್ನು ಸ್ವಲ್ಪ ತಿಳಿಯೋಣ. ಈ ಮಾತಿಗೆ ಎರಡು ಅರ್ಥಗಳಿವೆ. ಮೊದಲನೆಯದು ಭವಚಕ್ರದಿಂದ ಪಾರಾಗಿ, ಆಧ್ಯಾತ್ಮಿಕ ಜೀವನವನ್ನು ನಡೆಸಲು ಬಯಸುವವರು ಗುರುವಿನ ಬಳಿಗೆಬಂದು ಇಷ್ಟಲಿಂಗವನ್ನು ಪಡೆಯುತ್ತಾರೆ. ತಾವಾಗಿಯೇ ಇಷ್ಟಪಟ್ಟುಪಡೆದ ಲಿಂಗ ಆಗಿರುವುದರಿಂದ, ಇದು ‘ಇಷ್ಟಲಿಂಗ’ ಎನಿಸಿಕೊಳ್ಳುತ್ತದೆ. ಇನ್ನು ಎರಡನೆಯ ಅರ್ಥ: ‘ಇಷ್ಟ’ ಎಂಬ ಪದವನ್ನು ‘ಅನಿಷ್ಟ’ ಎಂಬ ಪದಕ್ಕೆ ವಿರುದ್ಧಾರ್ಥದಲ್ಲಿ ಬಳಸು ವುದುಂಟಷ್ಟೆ. ಆಗ ‘ಇಷ್ಟಲಿಂಗ’ ಎಂಬ ಪದಕ್ಕೆ ‘ಒಳ್ಳೆಯ ಲಿಂಗ’ ಅಥವಾ ಒಳಿ ತನ್ನು ಮಾಡುವ ಲಿಂಗ ಎಂಬ ಅರ್ಥ ಪ್ರಾಪ್ತವಾಗುತ್ತದೆ. ‘ಶಿವ- ಶಂಕರ’ ಎಂಬಪದಗಳಿಗೂ ಇದೇ ಅರ್ಥ ಇರುವುದನ್ನು ನಾವು ತಿಳಿಯಬಹುದು.ಇಷ್ಟಲಿಂಗದ ಮಾರ್ಗವನ್ನು ಯಾರು ಹಿಡಿದು ನಡೆಯು ತ್ತಾರೋ ಅವರಿಗೆ ಅನಿಷ್ಟ ನಷ್ಟವಾಗುತ್ತದೆ. ಇದನ್ನು ‘ಶಿವಯೋಗ’ದ ಹಿನ್ನೆಲೆಯಲ್ಲಿ ತುಸು ಅರ್ಥಮಾಡಿ ಕೊಳ್ಳೋಣ. ಅಂಗನು ಸದಾ ಲಿಂಗದ ಅಂಗವಷ್ಟೆ. ನಮ್ಮ ಕೈ ಹೇಗೆ ದೇಹದಿಂದ ಭಿನ್ನವಾದ ಅಂಗವಲ್ಲವೊ ಅದು ದೇಹದಭಾಗವಾಗದಿದ್ದರೆ ಅದಕ್ಕೆ ಹೇಗೆ ಬೆಲೆಯಿಲ್ಲವೊ ಹಾಗೆಯೇ ಅಂಗನು ತಾನು ಪ್ರತ್ಯೇಕವೆಂದು ತಿಳಿದುಕೊಂಡರೆ ದುಃಖ ಉಂಟಾಗುತ್ತದೆ. ಆದರೆ, ತಾನು ಪರಶಿವನಲ್ಲೆ ಇದ್ದು ಅವನ ಅಂಗವಾಗಿದ್ದೇನೆ ಎಂದು ತಿಳಿದಾಗ ಅತೀವ ಆನಂದ ಉಂಟಾಗುತ್ತದೆ.
ವಚನಕಾರರು, ಇಷ್ಟಲಿಂಗವನ್ನು ಧರಿಸಿದವರು ಮಾತ್ರ ಇಷ್ಟಲಿಂಗ ಪೂಜೆಯನ್ನು ಮಾಡಬೇಕೆಂದು ಆದೇಶಿಸುತ್ತಾರೆ. ಸಾಮಾನ್ಯವಾಗಿ ಊರಿನ ಗುಡಿಗಳಲ್ಲಿ ಸ್ಥಾವರಲಿಂಗದ ಪೂಜೆಯನ್ನು ಪೂಜಾರಿ ಮಾಡುವಾಗ, ಉಳಿದವರು ಭಕ್ತಿಯಿಂದ ನೋಡುತ್ತಾರೆ. ಅವರು ಸ್ಥಾವರಲಿಂಗದ ಪೂಜೆಯನ್ನು ಮಾಡಲಾರರು. ಇಷ್ಟಲಿಂಗದ ಪೂಜೆಗೆ ಸಮಸ್ತರೂ ಅರ್ಹರು. ಇಲ್ಲಿ ಜಾತಿ, ಮತ, ಲಿಂಗಭೇದವಾಗಲಿ ಇಲ್ಲ. ಆದರೆ, ಸ್ಥಾವರಲಿಂಗ ಪೂಜಕರಿಗೆ ಈ ಸ್ವಾತಂತ್ರ್ಯವಿಲ್ಲ. ಆದರೆ, ಪ್ರಾಣಲಿಂಗಿಗಳಾದವರು, ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿದವರು ತಮ್ಮ ಇಂದ್ರಿಯ, ಮನಸ್ಸು, ದೇಹಗಳಲ್ಲೇ ಲಿಂಗವನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾರೆ. ಅಂಥ ಅಧ್ಯಾತ್ಮ ಸಾಧಕರಿಗೆ ಇಷ್ಟಲಿಂಗವು ತಮ್ಮಲ್ಲಿ ಅಂತಸ್ಥವಾಗಿರುವ ಚಿತ್ಸ್ವರೂಪವೇ ಲಿಂಗದ ಕುರುಹು ಆಗುತ್ತದೆ. ಶಿವಯೋಗದ ಸಾಧಕರು ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ-ಇವು ಮೂರು ಒಂದೇ ಎಂದು ತಿಳಿಯುತ್ತಾರೆ.
ಅಲ್ಲಮಪ್ರಭು ದೇವರು ಇಷ್ಟಲಿಂಗದ ದಾರಿಯನ್ನೂ ಅಂತ ರಂಗದ ಮಾಣಿಕ್ಯವಾಗಿ ಇದನ್ನು ಸಾಧಿಸುವ ಬಗೆಯನ್ನೂ ಶರಣರಿಗೆತಿಳಿಸಿಕೊಡುತ್ತಾನೆ. ಎಂಟು ನೂರು ವರ್ಷಗಳ ಹಿಂದೆ, ಜಾತಿಭೇದ, ಲಿಂಗಭೇದ ಮತ್ತು ಮತಭೇದಗಳನ್ನು ನಿವಾರಿಸಿ ಪ್ರತಿಯೊಬ್ಬ ಸಾಧಕರನ್ನೂ ‘ಶಿವಯೋಗದ ನೆಲೆ’ಗೆ ಕರೆದೊಯ್ದ ಕೀರ್ತಿ ಅಲ್ಲಮಪ್ರಭುದೇವರಿಗೆ ಸಲ್ಲಬೇಕು. ಮಹಾಮನೆಯಲ್ಲಿ ಬಸವಣ್ಣ ಅಡಿಗಡಿಗೆ ಅಲ್ಲಮನನ್ನು ಸ್ತುತಿಸುತ್ತಲೇ ಇರುತ್ತಾನೆ. ಆಗ ಅಲ್ಲಮ
ಮನ ಮನ ಒಂದಾಗಿ ಅರಿವು ಸಮವಾದ ಬಳಿಕ/ಕೊಂಡಾಡ ಲಿಂಬುಂಟೆ ಹೇಳಾ?/ ಶಬ್ದಕ್ಕೆ ತೆರಹಿಲ್ಲ, ಗುಹೇಶ್ವರ ಲಿಂಗದಲ್ಲಿ/ ಬೆರಸಿ ಬೇರಿಲ್ಲ ಕಾಣಾ ಸಂಗನ ಬಸವಣ್ಣ (ಶೂನ್ಯ.ಸಂ.ಪು-96)
ಎಂದು ಮಾರ್ವಿುಕವಾಗಿ ನುಡಿಯುತ್ತಾರೆ. ಲೌಕಿಕ ಜಗತ್ತಿಗೆ ಕೊಂಡಾಡುವುದು ಬೇಕು. ಅದು ಲೋಕವ್ಯಾಪಾರದ ಗುಣ. ಆದರೆ, ಅಧ್ಯಾತ್ಮ ಸಾಧಕರು ಕೊಂಡಾಡುವುದಾಗಲಿ ಹೀಗೆಳೆಯುವುದಾಗಲಿ- ಇವೆರಡಕ್ಕೂ ಅತೀತರು. ಹಾಲು- ಹಾಲಿನಲ್ಲಿ ಬೆರತಂತೆ. ಇಲ್ಲಿ ಶಬ್ದಕ್ಕೆ ಅವಕಾಶವಿಲ್ಲ. ಇಷ್ಟಲಿಂಗದ ದಾರಿಯಲ್ಲಿ ಸೇರಿಕೊಂಡವರು ಶಬ್ದಮುಗ್ಧರಾಗುತ್ತಾರೆ. ಈ ಎಚ್ಚರವನ್ನು ಅಲ್ಲಮನು ತನ್ನ ಆಧ್ಯಾತ್ಮಿಕ ವಿನೋದದಿಂದ ತೋರಿಸುತ್ತ ಮುನ್ನಡೆಯುತ್ತಾನೆ. ಇದಕ್ಕೆ ಪ್ರತಿಮಾ ಸ್ವರೂಪದಂತೆ ಮರುಳು ಶಂಕರದೇವನನ್ನು ಬಸವಣ್ಣನಿಗೆ ಅಲ್ಲಮನು ತೋರಿಸುತ್ತಾನೆ. ಮರುಳು ಶಂಕರದೇವನು ಕಲ್ಯಾಣದ ಪ್ರಸಾದದ ಕುಳಿಯೊಳಗೆ ಹನ್ನೆರಡು ವರ್ಷ ತನ್ನ ನಿಜಸ್ವರೂಪವನ್ನು ಮರೆಸಿಕೊಂಡು ಅಧ್ಯಾತ್ಮ ಸಾಧನೆ ಮಾಡುತ್ತಿರುತ್ತಾನೆ. ಅಲ್ಲಮನು ಬಸವಣ್ಣನಿಗೆ ಮರುಳುಶಂಕರ ದೇವನ ‘ಶಿವಯೋಗ ಸಾಧನೆ’ಯನ್ನು ಪ್ರತ್ಯಕ್ಷವಾಗಿ ತೋರಿಸಿಕೊಡುತ್ತಾನೆ.
( ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)
(ಪ್ರತಿಕ್ರಿಯಿಸಿ:vvsudina@gmail.com, mallepuram@gmail.com)