

ಬ್ಯಾಕೋಡು: ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು.
ಮಂಗಳವಾರ ಮುಂಜಾನೆ 5ರಿಂದ ದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅರ್ಚನೆ, ದೇವಿಯ ಮೂಲ ಸ್ಥಾನದಲ್ಲಿ ನವಚಂಡಿಕಾ ಹೋಮ ನೆರವೇರಿತು. ಪೂರ್ಣಾಹುತಿ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳಲ್ಲಿ ದೇಗುಲದ ಧರ್ಮಾಧಿಕಾರಿ ಎಸ್.ರಾಮಪ್ಪ ಕುಟುಂಬ ಸಮೇತ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು, ಅಕ್ಕಿ, ಬೆಲ್ಲ, ವಿವಿಧ ಹರಕೆ ಪೂಜೆ ಸಲ್ಲಿಸಿ. ಮುಡಿಗಂಧ ಪ್ರಸಾದ ಸ್ವೀಕರಿಸಿದರು.
ಸೀಗೇ ಕಣಿವೆಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಿಗಂದೂರಿನತ್ತ ಹೆಜ್ಜೆ ಹಾಕಿದರು. ಸೀಗೇ ಕಣಿವೆಯ ಮೂಲ ಸ್ಥಾನದಲ್ಲಿ ದೇವಿಯ ಉದ್ಭವ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಹೊಸನಗರದ ಸಾರಗನಜಡ್ಡು ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು ಸಾನ್ನಿಧ್ಯ ವಹಿಸಿದ್ದರು.
ಅನ್ನ ದಾಸೋಹ: ಪ್ರಥಮ ದಿನದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಸ್ವೀಕರಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ದೇವಸ್ಥಾನ ಸಮಿತಿ ಪ್ರಸಾದ ವಿನಿಯೋಗಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಸಂಜೆ ವಿವಿಧ ಕಲಾ ತಂಡಗಳಿಂದ ಭಜನೆ, ನಾಟ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಲಾಂಚ್‌ನಲ್ಲಿ ಜನದಟ್ಟಣೆ: ಜಾತ್ರೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಟ್ಯಾಕ್ಸಿ, ಬಸ್, ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದರು. ಅಂಬಾರಗೊಡ್ಲು ಲಾಂಚ್ ತಟದಲ್ಲಿ ವಾಹನ ನಿಲ್ಲಿಸಿ, ಹೊಳೆಬಾಗಿಲು ಲಾಂಚ್ ಮೂಲಕ ಸಿಗಂದೂರು ದೇವಸ್ಥಾನಕ್ಕೆ ಆಗಮಿಸಿದರು. ಜನದಟ್ಟಣೆ ಹೆಚ್ಚಾಗಿದ್ದರಿಂದ ಭಕ್ತರು, ಸ್ಥಳಿಯರು ಪ್ರಯಾಣ ಮಾಡಲು ಹರಸಾಹಸ ಪಟ್ಟರು.
ಅಖಂಡ ಜ್ಯೋತಿ ಮೆರವಣಿಗೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಚಾಲನೆ ನೀಡಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ಪಿ ಪಿ.ವೀರೇಂದ್ರಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕೆಡಿಪಿ ಸದಸ್ಯ ಸತ್ಯನಾರಾಯಣ, ಗಣೇಶ ಜಾಕಿ, ಶ್ರೀದೇವಿ ರಾಮಚಂದ್ರ ಮುಂತಾದವರಿದ್ದರು.