ಕಾಂಗ್ರೆಸ್‌ನಿಂದ ಭಾಗ್ಯಲಕ್ಷ್ಮಿ ಯೋಜನೆ ಸ್ಥಗಿತ

prachara sabhe
ಶಿಕಾರಿಪುರದ ಮತ್ತಿಕೋಟೆಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಮತಯಾಚಿಸಿದರು. ಎಚ್.ಟಿ.ಬಳಿಗಾರ್, ಮಹೇಶ್ ಹುಲ್ಮಾರ್, ಹನುಮಂತಪ್ಪ, ಸಿದ್ಲಿಂಗಪ್ಪ ಇತರರಿದ್ದರು.
Published on

ಶಿಕಾರಿಪುರ: ನನ್ನ ಅವಧಿಯಲ್ಲಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯಡಿ ಇಂದು ಸಹಸ್ರಾರು ಯುವತಿಯರು ಫಲಾನುಭವಿಗಳಾಗಿದ್ದಾರೆ. ಆದರೆ ಮಹಿಳೆಯರಿಗೆ ಅನುಕೂಲವಾಗಿದ್ದ ಯೊಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಮತ್ತಿಕೋಟೆಯಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಡವರ ಮನೆಯ ಹೆಣ್ಣು ಮಕ್ಕಳ ಬದುಕಿಗೆ ಆಶಾಕಿರಣವಾಗಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಈಗಿನ ಕಾಂಗ್ರೆಸ್ ನಿಲ್ಲಿಸಿದೆ. ಭಾಗ್ಯಲಕ್ಷ್ಮಿ ಯೋಜನೆಯು ಮಹಿಳಾ ಪರವಾದ ಅದ್ಭುತ ಯೋಜನೆಯಾಗಿತ್ತು ಎಂದರು.
ಜಗತ್ತಿನಲ್ಲಿ ಮೋದಿ ಅವರು ವಿಶ್ವನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಬಗ್ಗೆ ವಿಪಕ್ಷ ನಾಯಕರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅದು ಅವರ ಮನಸ್ಥಿತಿ ತೋರಿಸುತ್ತದೆ. ಜನರಿಗೆ ಎಲ್ಲರ ವ್ಯಕ್ತಿತ್ವದ ಬಗ್ಗೆ ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನಾನು ಅಧಿಕಾರದಲ್ಲಿ ಇದ್ದಾಗ ಯಾವುದೇ ಜಾತಿ, ಮತ ನೋಡದೇ ಎಲ್ಲ ಸಮುದಾಯಗಳಿಗೂ ಅನುದಾನ ನೀಡಿದ್ದೇನೆ. ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದ್ದೇನೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ಆರು ಸಾವಿರ ರೂ. ಜತೆ ರಾಜ್ಯದಿಂದ ನಾಲ್ಕು ಸಾವಿರ ರೂ. ನೀಡಲಾಗುತ್ತಿತ್ತು. ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ತನ್ನ ಪಾಲಿನ ಹಣ ನೀಡುತ್ತಿಲ್ಲ. ಇದು ಕಾಂಗ್ರೆಸ್‌ಗಿರುವ ರೈತಪರ ಕಾಳಜಿ ಎಂಥದ್ದು ಎಂಬುದನ್ನು ತೊರಿಸುತ್ತದೆ ಎಂದು ಟೀಕಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರತಿ ತಾಲೂಕಿನಲ್ಲಿ ಜನರು ತೋರಿಸುತ್ತಿರುವ ಅಭಿಮಾನ ಸಂತಸ ಮೂಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತಷ್ಟು ಬಲ ನೀಡಿದೆ. ಪ್ರತಿ ಸಲ ನನಗೆ ಗೆಲುವು ನೀಡಿದಾಗಲೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ಕೆಲಸ ಮಾಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ್ದೇನೆ. ದೇಶದಲ್ಲಿ ಮೋದಿ ಕೈ ಬಲಪಡಿಸಲು ನನ್ನನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಎಚ್.ಟಿ.ಬಳಿಗಾರ್ ಮಾತನಾಡಿ, ದೇಶದಲ್ಲಿ ಮಾದರಿ ಸಂಸದರಾಗಿ ಕೆಲಸ ಮಾಡಿರುವ ಬಿ.ವೈ.ರಾಘವೇಂದ್ರ ಅವರು, ಜಿಲ್ಲೆಗೆ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದಾರೆ. ಯುವ ನಾಯಕನನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾ ಸಿದ್ಲಿಂಗಪ್ಪ, ಮಹೇಶ ಹುಲ್ಮಾರ್, ಗಿರೀಶ್, ಯೋಗೀಶ್, ಸುರೇಶ್, ಶಿವಬಸಪ್ಪ, ಆನಂದಪ್ಪ, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net