ಪ್ಯಾರಿಸ್​ನಿಂದ ದೆಹಲಿ ಏರ್ಪೋರ್ಟ್​ಗೆ ಬಂದ ಪಂಜಾಬ್ ಸಿಎಂ ಮಾನ್​ಗೆ 3 ಗಂಟೆ ತಡೆ, 50 ಸಾವಿರ ದಂಡ; BJP ವಿರುದ್ಧ AAP ಕೆಂಡ..Bhagwant Mann

ಪಂಜಾಬ್ ಸಿಎಂ ಭಗವಂತ್ ಮಾನ್(ಸಂಗ್ರಹ ಚಿತ್ರ)
ಪಂಜಾಬ್ ಸಿಎಂ ಭಗವಂತ್ ಮಾನ್(ಸಂಗ್ರಹ ಚಿತ್ರ)
Published on: 
  • ಪ್ಯಾರಿಸ್‌ನಿಂದ ಮರಳಿದ ಪಂಜಾಬ್ ಸಿಎಂ ಭಗವಂತ್ ಮಾನ್​ಗೆ ದೆಹಲಿ ಏರ್ಪೋರ್ಟ್​ನಲ್ಲಿ ತಡೆ.

  • 3 ಗಂಟೆಗಳ ಕಾಲ ತಡೆ. 50,000 ರೂ. ದಂಡ ವಿಧಿಸಿದಕ್ಕೆ ಕಿಡಿಕಾರಿದ ಎಎಪಿ.

  • ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ನಾಯಕರು.

  • ಪಂಜಾಬ್‌ನ ಉತ್ಪನ್ನಗಳ ಪ್ರಚಾರಕ್ಕಾಗಿ ಪ್ಯಾರಿಸ್‌ನಲ್ಲಿ ನಡೆದ 'SIAL Paris 2026' ಪ್ರದರ್ಶನಕ್ಕೆ ತೆರಳಿದ್ದ ಪಂಜಾಬ್ ಸಿಎಂ.

ಪ್ಯಾರಿಸ್‌ನಿಂದ ಭಾರತಕ್ಕೆ ಮರಳಿದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿಯಲಾಗಿದೆ ಮತ್ತು 50 ಸಾವಿರ ದಂಡ ವಿಧಿಸಲಾಗಿದೆ ಎಂದು ಆಮ್​ ಆದ್ಮಿ ಪಕ್ಷವು ಆರೋಪಿಸಿದೆ.

ಕೇಂದ್ರ ಸರ್ಕಾರದ 'ಮೇಲಿನ ಒತ್ತಡದಿಂದ' ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ದೆಹಲಿ ಏರ್ಪೋರ್ಟ್​ನಲ್ಲಿ ತಡೆಹಿಡಿಯಲಾಗಿದೆ. ಅಲ್ಲದೆ ಭಗವಂತ್ ಮಾನ್ ಅವರಿಗೆ 50,000 ರೂಪಾಯಿಗಳ ಚಲನ್ (ದಂಡ) ವಿಧಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಪಂಜಾಬ್​ ಸಿಎಂ ಅವರನ್ನು ತಡೆಹಿಡಿದಿದ್ಯಾಕೆ, ದಂಡ ವಿಧಿಸಿದ್ದು ಯಾಕೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ಪಕ್ಷ ಹಂಚಿಕೊಂಡಿಲ್ಲ.

ಬಲ್​ತೇಜ್ ಪನ್ನು ಹೇಳಿದ್ದಿಷ್ಟು

ಪಂಜಾಬ್ ಎಎಪಿ ಮಾಧ್ಯಮ ಉಸ್ತುವಾರಿ ಬಲ್​ತೇಜ್ ಪನ್ನು, ಸಿಎಂ ಭಗವಂತ್ ಮಾನ್ ಅವರು ಪ್ಯಾರಿಸ್‌ ಪ್ರವಾಸ ಮುಗಿಸಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಾಗ ನಿಮ್ಮ ಲಗೇಜ್ ಇನ್ನೂ ಬರುತ್ತಿದೆ. ಲಗೇಜ್ ಪರಿಶೀಲನೆ ನಡೆಯುತ್ತಿದೆ ಎಂಬ ಸಬೂಬು ಹೇಳಿ ಉದ್ದೇಶ ಪೂರ್ವಕವಾಗಿ ಅವರನ್ನು ಮೂರು ಗಂಟೆ ತಡೆಹಿಡಿದಿದ್ದಾರೆ. ಇದು ಶುದ್ಧ ಸುಳ್ಳು ಮತ್ತು ಪಂಜಾಬ್‌ಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಕೇಂದ್ರದಿಂದ ಒತ್ತಡ

ಅವರು ಲಗೇಜ್​ಗಳನ್ನು ಕಾರಿನಲ್ಲಿ ಇರಿಸಿ ಹೊರಡಲು ಸಿದ್ಧರಾದಾಗ ಅವರಿದ್ಧ ಸ್ಥಳಕ್ಕೆ ಓಡಿ ಬಂದ ಅಧಿಕಾರಿಗಳು ನಾವು ಮೇಲಿನಿಂದ ಭಾರಿ ಒತ್ತಡದಲ್ಲಿದ್ದೇವೆ ಎಂದು ಹೇಳಿ 50,000 ರೂ. ದಂಡ ವಿಧಿಸಿದರು. ಅಂದರೆ ಈ ಎಲ್ಲ ಹೈಡ್ರಾಮಾವು ಮೇಲಿನಿಂದ ಬಂದ ಆದೇಶದ ಮೇರೆಗೆ ನಡೆದಿದೆ ಎಂಬುದು ಸಾಬೀತಾಗಿದೆ' ಎಂದು ಪನ್ನು ಹೇಳಿದರು.

ಭಗವಂತ್​ ಮಾನ್​ ಅವರು ವಿಶ್ವದ ಎರಡನೇ ಅತಿದೊಡ್ಡ ಆಹಾರ ಉತ್ಸವದಲ್ಲಿ ಪಂಜಾಬ್‌ನ ಪ್ರಸಿದ್ಧ ಉತ್ಪನ್ನಗಳನ್ನು ಪರಿಚಯಿಸಲು ಪ್ಯಾರಿಸ್​ಗೆ ತೆರಳಿದ್ದರು. ಹೈಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ಮುಖ್ಯಮಂತ್ರಿ ವಿಚಾರದಲ್ಲಿ ಕಾನೂನು ಪಾಲನೆಯಾಗಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಒಂದೆರಡು ಸ್ಥಾನಗಳು ಮಾತ್ರ ಸಿಗಲಿವೆ; ಸಿಎಂ ಭಗವಂತ್ ಮಾನ್ ಭವಿಷ್ಯ | CM Bhagwant Mann

ಸಿಎಂಗೆಎ ಅವಮಾನ

ಮುಖ್ಯಮಂತ್ರಿಯೊಬ್ಬರಿಗೆ 50 ಸಾವಿರ ದಂಡದ ಚಲನ್ ನೀಡಿ ಅವಮಾನ ಮಾಡಿರುವುದು ಇದೇ ಮೊದಲು. ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಈ ರೀತಿ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ತಡೆದಿರುವ ಉದಾಹರಣೆ ಇದೆಯೇ?. ಭಗವಂತ್​ ಮಾನ್​ ಅವರು ಪಂಜಾಬಿ ಆಗಿರುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬಿಜೆಪಿಗರಿಗೆ ಸಹಿಸಲು ಆಗುತಿಲ್ಲ ಎಂದು ಎಎಪಿ ನಾಯಕರು ಗುಡುಗಿದ್ದಾರೆ.

ಎಎಪಿ ನಾಯಕರ ತೀವ್ರ ಆಕ್ರೋಶ

ಎಎಪಿ ನಾಯಕ ಸೌರಭ್ ಭಾರದ್ವಾಜ್ ಕೂಡ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಸಿಎಂ ಮಾನ್ ಪ್ಯಾರಿಸ್‌ಗೆ ತೆರಳಿದ್ದರು. ಕೇಂದ್ರ ಸರ್ಕಾರವು ಎನ್‌ಒಸಿ ನೀಡಲು ನಿರಾಕರಿಸಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಕಾನೂನು ಹೋರಾಟ ನಡೆಸಿ ಅವರು ಈ ಪ್ರವಾಸ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಕೇಂದ್ರದ ಈ ದುರಂಹಕಾರ ಕೊನೆಗೊಳ್ಳಬೇಕು ಎಂದು ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'SIAL Paris 2026'ಯಲ್ಲಿ ಸಿಎಂ ಭಾಗಿ

ಪಂಜಾಬ್‌ನಲ್ಲಿ ಮಾರ್ಕ್‌ಫೆಡ್ ಮಳಿಗೆಯ ಮೂಲಕ ರಾಜ್ಯದ ಉತ್ಪನ್ನಗಳನ್ನು ಪ್ರಚಾರ ಮಾಡಲು ಅಕ್ಟೋಬರ್ 17 ರಿಂದ 21 ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಆಹಾರ ವ್ಯಾಪಾರ ಪ್ರದರ್ಶನ 'SIAL Paris 2026' ರಲ್ಲಿ ಭಾಗವಹಿಸಲು ಸಿಎಂ ಮಾನ್ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಕೇಂದ್ರ ಸರ್ಕಾರವು ಈ ಹಿಂದೆ ನಾಲ್ಕು ಬಾರಿ ಸಿಎಂ ವಿದೇಶಿ ಪ್ರವಾಸಕ್ಕೆ ಅನುಮತಿ ನಿರಾಕರಿಸಿತ್ತು ಎಂದು ಎಎಪಿ ಆರೋಪಿಸಿದೆ.

ಇದೇ ವೇಳೆ, ಶಿರೋಮಣಿ ಅಕಾಲಿ ದಳದ ನಾಯಕ ವಿಕ್ರಮ್ ಸಿಂಗ್ ಮಜಿಥಿಯಾ ಅವರು ಮಾತನಾಡಿದ್ದು, 'ಅತಿ ಹೆಚ್ಚು ಲಗೇಜ್ ಅಥವಾ ಅನುಮತಿಗಿಂತ ಹೆಚ್ಚಿನ ಹಣದ ವಿಚಾರವಾಗಿ ಕಸ್ಟಮ್ಸ್ ಅಧಿಕಾರಿಗಳು ಸಿಎಂ ಮಾನ್ ಹಾಗೂ ಅವರ ಪತ್ನಿ ಗುರುಪ್ರೀತ್ ಕೌರ್ ಅವರನ್ನು ಸುಮಾರು 3 ಗಂಟೆಗಳ ಕಾಲ ತಡೆದು ಪ್ರಶ್ನಿಸಿದ್ದರು' ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net