

ಬೆಂಗಳೂರು :‘ಬಂಗಾರಿ’, ‘ಬೆಟ್ಟದ ದಾರಿ’,‘ಶಿವನಪಾದ’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಮಾ. ಚಂದ್ರು ‘ಭಗವತಿ’ ಮೂಲಕ ಮಕ್ಕಳ ಚಿತ್ರವೊಂದು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಾ.ಚಂದ್ರು ಬರೆದಿದ್ದು, ಇದೊಂದು ಮಕ್ಕಳ ಸಾಹಸದ ಕಥೆಯಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಅನ್ಯಾಯದ ವಿರುದ್ಧ ಸಿಡಿದು ನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವ ಸಾಹಸಮಯ ಕಥೆಯನ್ನು ರೋಚಕತೆಯೊಂದಿಗೆ ತೋರಿಸಲಾಗುತ್ತಿದೆ.
ಇಂದಿನ ಪೀಳಿಗೆಯ ಮಕ್ಕಳಿಗೆ ಈ ಕಥೆ ಇಷ್ಟವಾಗಲಿದೆ.
ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ಪಿ,ಕೆ.ದೀಪಕ್, ಅದ್ವೆತ್ ಪ್ರೇರಣ್, ಆದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ.ಹೇರಂಭ, ಭಾನು, ಮೋಹನ್‌ಕುಮಾರ್, ಡಿ.ಕೆ.ಸತೀಶ್, ಶರತ್, ಹರ್ಷ ನಟಿಸಲಿದ್ದಾರೆ. ಆಗಸ್ಟ್ 5ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಎರಡು ಹಾಡುಗಳಿದ್ದು, ರಾಜೇಶ್‌ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.