ಸಾಗರದಲ್ಲಿ ಭಗವದ್ಗೀತೆ ಅಭಿಯಾನ

sgr
ಕೆ.ವಿ.ಜಯರಾಮ್
Published on

ಸಾಗರ: ತಾಲೂಕಿನ ಲಿಂಗದಹಳ್ಳಿಯಲ್ಲಿ ಭಗವದ್ಗೀತೆ ಅಭಿಯಾನಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಸೆ.11ರಂದು ಚಾಲನೆ ನೀಡುವರು ಎಂದು ಭಗವದ್ಗೀತೆ ಅಭಿಯಾನದ ತಾಲೂಕು ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಹೇಳಿದರು.

ಮಡಸೂರು ಲಿಂಗದಹಳ್ಳಿಯ ರಾಮಕೃಷ್ಣ ವಸತಿ ಶಾಲೆಯಲ್ಲಿ ಶ್ರೀಗಳು ಮಧ್ಯಾಹ್ನ 2ಕ್ಕೆ ಅಭಿಯಾನಕ್ಕೆ ಚಾಲನೆ ನೀಡುವರು. ಕಳೆದ ಮೂರು ತಿಂಗಳಿನಿಂದ ನಮ್ಮ ಸಮಿತಿ ತಾಲೂಕಿನಲ್ಲಿ ಅಭಿಯಾನದ ಸಂಬಂಧ ಕಾರ್ಯನಿರ್ವಹಿಸುತ್ತಿದೆ. 5ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಭಗವದ್ಗೀತೆ ಕಂಠಪಾಠ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ.30ರಂದು ಶಿವಮೊಗ್ಗದಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ಸಾಗರ ತಾಲೂಕಿನಿಂದ ಕನಿಷ್ಠ 5 ಸಾವಿರ ಮಕ್ಕಳು, ಹಿರಿಯರು ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ನಿಂದ ಆದಷ್ಟು ದೂರವಿರಸಬೇಕು ಎನ್ನುವ ಸಂಕಲ್ಪದೊಂದಿಗೆ ಭಗವದ್ಗೀತೆ ಮನೆಮನೆಯಲ್ಲೂ ಮಾತಾಗಬೇಕು ಎನ್ನುವ ಉದ್ದೇಶದಿಂದ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳು ಭಗವದ್ಗೀತೆಯನ್ನು ಜನಮಾನಸಕ್ಕೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಈ ಅಭಿಯಾನ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಮಾರು 50 ಸಾವಿರ ಕಂಠದಿಂದ ಏಕಕಾಲದಲ್ಲಿ ಭಗವದ್ಗೀತೆ ಪಠಣ ನಡೆಯಲಿದೆ ಎಂದರು.

ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ದೇವರಾಜ್ ಮಾತನಾಡಿ, ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರದ ಮಹತ್ವವನ್ನು ಪರಿಚಯಿಸಬೇಕು. ಈ ದಿಸೆಯಲ್ಲಿ ಇಂಥದ್ದೊಂದು ಚಿಂತನೆಯನ್ನು ಶ್ರೀಗಳು ಮುನ್ನಡೆಸಿದ್ದಾರೆ. ನಾವೆಲ್ಲರೂ ಪಾಲ್ಗೊಳ್ಳೋಣ ಎಂದರು.

ಗೋಪಿ ದೀಕ್ಷಿತ್, ಕೆ.ವಿ.ಸುರೇಶ್, ಲೋಕೇಶ್, ವಿನಾಯಕ, ಸುದರ್ಶನ, ಶ್ರೀಕೃಷ್ಣ, ಕೃಷ್ಣಮೂರ್ತಿ, ಕಸ್ತೂರಿ, ಕೆ.ಎಚ್.ಶ್ರೀಪಾದ, ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net