

ಶಿಕಾರಿಪುರ: ಭಗವದ್ಗೀತೆಯು ಸಾರ್ವಕಾಲಿಕ ಸತ್ಯಗಳ ಸಾಕ್ಷಿರೂಪ. ಭಾವ-ಅನುಭಾವದ ಜತೆಗೆ ವಾಸ್ತವ ಸತ್ಯವನ್ನು ಜಗತ್ತಿಗೆ ತಿಳಿಸಿಕೊಡುವ ಮಹಾಕಾವ್ಯ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರೀಕೃಷ್ಣ ಸರ್ವಾಂತರ್ಯಾಮಿ. ಬದುಕಿನ ಎಲ್ಲ ಸೂಕ್ಷ್ಮಗಳನ್ನು ಭಗವದ್ಗೀತೆ ಮೂಲಕ ಜಗತ್ತಿಗೆ ಸಾರಿದ್ದಾನೆ. ಬದುಕಿನ ಕಾಲಘಟ್ಟದಲ್ಲಿ ಬರುವ ಎಲ್ಲ ಸಂಬಂಧಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಶ್ರೀಕೃಷ್ಣ, ಧರ್ಮ ಮಾರ್ಗದ ಸಾರವನ್ನು ಸಮರ್ಪಕವಾಗಿ ತಿಳಿಸಿದ್ದಾನೆ ಎಂದರು.
ನಮ್ಮ ಜೀವನ ಪಯಣದಲ್ಲಿ ಗೀತೆಯ ಪಾತ್ರ ಬಹಳ ಪ್ರಮುಖ. ಅದರಲ್ಲಿನ ಅಂತರಂಗದ ಸಾರವನ್ನು ತಿಳಿಯಬೇಕು. ಸತ್ವಯುತ ಮತ್ತು ಸತ್ಯವಾದ ಆಲೋಚನೆಗಳು ನಮಗೆ ಗೀತೆಯಿಂದ ತಿಳಿದು ಬರುತ್ತವೆ. ಜನಮನದಲ್ಲಿ ಗೀತೆಯ ಅರಿವು ಮೂಡಿಸಲು ಮತ್ತು ಗೀತೆಯ ಅಂತಃಸತ್ವದ ಬಗ್ಗೆ ಜನತೆಗೆ ತಿಳಿಸಿಕೊಡಲು ಅಭಿಯಾನ ನಡೆಯುತ್ತದೆ. ಸ್ವರ್ಣವಲ್ಲಿ ಮಠದಿಂದ ಪ್ರಸ್ತುತ ಹನ್ನೊಂದನೇ ಅಧ್ಯಾಯದ ಅಭಿಯಾನವು ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ. ನ.30ರಂದು ಸಮರ್ಪಣಾ ಸಮಾರಂಭ ಶಿವಮೊಗ್ಗದಲ್ಲಿ ಜರುಗುತ್ತಿದೆ ಎಂದು ತಿಳಿಸಿದರು.
ನಾವು ಸದಾ ಧಾರ್ಮಿಕ ಚಿಂತನೆಗಳಿಂದ ಪರಿಶುದ್ಧವಾಗುತ್ತೇವೆ. ಧರ್ಮ ನಮಗೆ ಸಂಸ್ಕಾರ ನೀಡುತ್ತದೆ. ಹಿರಿಯರು ನಮಗೆ ಬಿಟ್ಟುಹೋದ ಸದ್ವಿಚಾರ, ಆಚರಣೆಗಳು, ಸಂಪ್ರದಾಯಗಳು ನಮ್ಮನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡುತ್ತವೆ. ಸಹನೆ, ಶಾಂತಿ, ಸಹೃದಯತೆಯನ್ನು ಧಾರೆ ಎರೆಯುತ್ತವೆ. ಯಾವ ಕಾರಣಕ್ಕೂ ನಾವು ಧರ್ಮಮಾರ್ಗದಿಂದ ವಿಮುಖರಾಗಬಾರದು ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆರ್.ಡಿ.ಸತೀಶ್, ದಿವಾಕರ್ ದೀಕ್ಷಿತ್, ವಸಂತ ಮಾಧವ, ಗಣಪತಿ ಭಟ್, ಅಂಜನ್ ಭಟ್, ಹರೀಶ್ ಜೋಯ್ಸ, ಶಿವರಾಂ ಭಟ್, ಸುಕನ್ಯಾ, ಗೌರಿ ಭಟ್, ಸುನೀತಾ ಜೋಯ್ಸ್, ರೂಪಾ ವೆಂಕಟೇಶ್ ಇತರರಿದ್ದರು.