

ಶಿವಮೊಗ್ಗ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ವರ್ಷದ ಭಗವದ್ಗೀತಾ ಅಭಿಯಾನವು ಅ.25ರಿಂದ ಆರಂಭವಾಗಿ ನ.29ರವರೆಗೆ ರಾಜ್ಯವ್ಯಾಪಿ 337 ಸ್ಥಳಗಳಲ್ಲಿ ನಡೆಯಲಿದೆ. ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಸಮರ್ಪಣೆ ಸಮಾರಂಭ ನ.30ರಂದು ಶಿವಮೊಗ್ಗದಲ್ಲಿ ನೆರವೇರಲಿದೆ.
ಈ ಅಭಿಯಾನದ ಉದ್ಘಾಟನೆಯು ಅ.25ರಂದು ರಾಜ್ಯದ 337 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಅಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುವರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಯಾನ ಉದ್ಘಾಟಿಸಲಿದ್ದಾರೆ. ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಶಾಸಕ ಎಸ್.ಎನ್.ಚನ್ನಬಸಪ್ಪ, ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಸ್.ಅರುಣ್ ಉಪಸ್ಥಿತರಿರುತ್ತಾರೆ.
ಅಭಿಯಾನದ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಸವ ಕೇಂದ್ರದ ಡಾ. ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 2007ರಲ್ಲಿ ಆರಂಭವಾದ ಭಗವದ್ಗೀತಾ ಅಭಿಯಾನವು ಪ್ರತಿ ವರ್ಷ ಯಶಸ್ವಿಯಾಗಿ ಸಾಗುತ್ತ ಬಂದಿದೆ. ಕರೊನಾ ಅವಧಿಯಲ್ಲಿ ಎರಡು ವರ್ಷ ಆನ್‌ಲೈನ್ ಮೂಲಕ ಅಭಿಯಾನ ನಡೆಸಲಾಗಿತ್ತು. ರಾಜ್ಯವ್ಯಾಪಿ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಮಕ್ಕಳಿಗೆ ಅಭಿಯಾನದ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಎಲ್ಲ ಶಿಕ್ಷಣ ಸಂಸ್ಥೆಗಳ ಸಹಕಾರವನ್ನು ಕೋರಲಾಗುವುದು. ಇದಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಪ್ರಧಾನ ಸಂಚಾಲಕ ಪಿ.ಪಿ.ಹೆಗಡೆ, ಸಲಹೆಗಾರ ಟಿ.ಜಿ.ಲಕ್ಷ್ಮೀನಾರಾಯಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.