25ಕ್ಕೆ ಭಗವದ್ಗೀತಾ ಅಭಿಯಾನ ಉದ್ಘಾಟನೆ

swarnavalli sri
ಶಿವಮೊಗ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಕೆ.ಬಿ.ಪ್ರಸನ್ನಕುಮಾರ್, ಕೆ.ಇ.ಕಾಂತೇಶ್, ಡಾ.ಬಾಲಕೃಷ್ಣ ಹೆಗಡೆ, ಅಶೋಕ್ ಜಿ.ಭಟ್ ಮುಂತಾದವರಿದ್ದರು.
Published on

ಶಿವಮೊಗ್ಗ: ಈ ಬಾರಿಯ ಭಗವದ್ಗೀತಾ ಅಭಿಯಾನದ ಮೂಲಕ ರಾಜ್ಯದ ವಿವಿಧೆಡೆ ಒಂದು ಸಾವಿರ ಉಪನ್ಯಾಸಗಳನ್ನು ಏರ್ಪಡಿಸುವ ಗುರಿ ಹೊಂದಲಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 500 ಕಾರ್ಯಕ್ರಮಗಳು, ರಾಜ್ಯದ ಇತರೆಡೆ 500 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿವೆ ಎಂದು ತಿಳಿಸಿದರು.

ಶಾಲಾ - ಕಾಲೇಜುಗಳು, ಸಂಘ ಸಂಸ್ಥೆಗಳು, ಎಲ್ಲ ಸಮಾಜದವರು ತಮ್ಮ ವ್ಯಾಪ್ತಿಯಲ್ಲಿ ಭಗವದ್ಗೀತೆಯ 11ನೇ ಅಧ್ಯಾಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಅ.25ರಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ. ನ.30ರಂದು ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಮಹಾಸಮರ್ಪಣೆ ನಡೆಯುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕಾಯ್ದೆಗಳ ಕುರಿತ ವಿಚಾರಸಂಕಿರಣ ಹಮ್ಮಿಕೊಳ್ಳಲಾಗುವುದು. ಅ.18ರ ವರೆಗೆ ಶಿವಮೊಗ್ಗದ ವಿವಿಧ ತಾಲೂಕುಗಳು, ಹೋಬಳಿಗಳಲ್ಲಿ ಅಭಿಯಾನದ ಕುರಿತು ಸಭೆ ಹಮ್ಮಿಕೊಳ್ಳಲಾಗುವುದು ಎಂದರು.

ಅಭಿಯಾನದ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅಧ್ಯಕ್ಷ ಡಿ.ಎಸ್.ಅರುಣ್, ಕಾರ್ಯಾಧ್ಯಕ್ಷ ಅಶೋಕ್ ಜಿ.ಭಟ್, ಪ್ರಧಾನ ಕಾರ್ಯದರ್ಶಿ ಕೆ.ಇ.ಕಾಂತೇಶ್, ಮಾಜಿ ಎಂಎಲ್‌ಎ ಕೆ.ಬಿ.ಪ್ರಸನ್ನಕುಮಾರ್ ಮುಂತಾದವರು ಅಭಿಯಾನದ ಯಶಸ್ಸಿಗೆ ಸಲಹೆಗಳನ್ನು ನೀಡಿದರು. ಪ್ರಮುಖರಾದ ಡಾ.ಬಾಲಕೃಷ್ಣ ಹೆಗಡೆ, ಪಿ.ಪಿ.ಹೆಗಡೆ, ಸಂದೇಶ್ ಉಪಾಧ್ಯ, ಜಿಎಸ್‌ಬಿ ಸಮಾಜದ ಪ್ರಮುಖರಾದ ಭಾಸ್ಕರ ಕಾಮತ್, ರಮೇಶ್ ಶೆಣೈ, ಅನಂತ ಶಾನುಭಾಗ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net