

ಸಾಗರ: ಶಿವಮೊಗ್ಗದಲ್ಲಿ ನ.30ರಂದು ಭಗವದ್ಗೀತೆ ಕುರಿತು ಬೃಹತ್ ಅಭಿಯಾನ ನಡೆಯಲಿದ್ದು, ಸುಮಾರು 50 ಸಾವಿರ ಜನರು ಏಕಕಂಠದಲ್ಲಿ ಭಗವದ್ಗೀತೆ ಪಠಣ ಮಾಡಲಿದ್ದಾರೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮತ್ತು ಭಗವದ್ಗೀತಾ ಅಭಿಯಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಕೃಷ್ಣನಿಗೆ ಸಮರ್ಪಣೆ ಮಾಡುವ ಭಗವದ್ಗೀತೆ ಪಠಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಶಿಕ್ಷಣ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪಾಲ್ಗೊಂಡವರು ಭಗವದ್ಗೀತೆ ಕಲಿತು ಅದನ್ನು ತಮ್ಮ ಅಕ್ಕಪಕ್ಕದವರಿಗೆ ಕಲಿಸುವ ಮೂಲಕ ಅವರು ಸಹ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಗಬೇಕು ಎಂದರು.
ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ್ ಭಟ್ ಮಾತನಾಡಿ, ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತೆ ಅಭಿಯಾನ ನಡೆಯಲಿದೆ. ಈಗಾಗಲೇ ಭಗವದ್ಗೀತೆ ಕಲಿಸುವ ಕಾರ್ಯಾಗಾರಗಳು ನಡೆಯುತ್ತಿವೆ. ಭಗವದ್ಗೀತೆ ಸಾರವನ್ನು ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಲು ಸಹ ಇದು ಸಹಕಾರಿ ಎಂದು ಹೇಳಿದರು.
ಸಮಿತಿಯ ತಾಲೂಕು ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ, ಮಕ್ಕಳಿಗೆ ಭಗವದ್ಗೀತೆ ಕುರಿತು ಅರಿವು ಮೂಡಿಸಬೇಕು. ಭಗವದ್ಗೀತೆ ನಮ್ಮ ನೆಲದ ಸಾರವನ್ನು ಹೊಂದಿದ್ದು, ಸನ್ಮಾರ್ಗವನ್ನು ಬೋಧಿಸಿದೆ ಎಂದು ತಿಳಿಸಿದರು. ಅಡಕೆ ವರ್ತಕರ ಸಂಘದ ಅಧ್ಯಕ್ಷ ನಿರಂಜನ ಕೋರಿ, ಭರತ್ ನಾಡಿಗ್, ವಿದ್ವಾನ್ ಶಂಕರ ಭಟ್, ವಿ.ಟಿ.ಭಟ್, ಮಾ.ಸ.ನಂಜುಂಡಸ್ವಾಮಿ, ಮಮತಾ, ಜ್ಯೋತಿ, ವೀಣಾ, ಸುಜಾತಾ ಇತರರಿದ್ದರು.