

ಶಿವಮೊಗ್ಗ: ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿವಮೊಗ್ಗದ ಸ್ವರ್ಣರಶ್ಮೀ ಟ್ರಸ್ಟ್ ಆಶಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ-2025 ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ ಇಡೀ ರಾಜ್ಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ನಡೆಯುತ್ತಿದೆ. ಹಾಗೆಯೇ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ 11ನೇ ಅಧ್ಯಾಯದ ಪಠಣ ಆರಂಭವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5ನೇ ತರಗತಿಯಿಂದ ಪದವಿಪೂರ್ವ ತರಗತಿಗಳವರೆಗೆ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬಹುದು. ಈಗಾಗಲೇ ಶಿವಮೊಗ್ಗ ತಾಲೂಕಿನಲ್ಲಿ 135 ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನ ಆರಂಭವಾಗಿದೆ. ಪಠಣ ಹೇಳಿಕೊಡಲು 50 ಶಿಕ್ಷಕರನ್ನು ಸಜ್ಜುಗೊಳಿಸಲಾಗಿದೆ. ಇನ್ನೂ 50 ಪ್ರಶಿಕ್ಷಕರು ಸಜ್ಜಾಗುತ್ತಿದ್ದಾರೆ ಎಂದರು.
ವಿಶ್ವರೂಪ ದರ್ಶನದ 11ನೇ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು. ಭಾಗವಹಿಸುವವರು 11ನೇ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಕಂಠಪಾಠ ಮಾಡಬೇಕು. 5 ನಿಮಿಷದ ಅವಧಿಯೊಳಗೆ ನಿರ್ಣಾಯಕರು ಸೂಚಿಸುವ ಯಾವುದೇ 10 ಶ್ಲೋಕಗಳನ್ನು ಅನುಕ್ರಮವಾಗಿ ಹೇಳಬೇಕು. ಹಾಗೆಯೇ ಭಾಷಣ ಸ್ಫರ್ಧೆಯನ್ನು ಕೂಡ ಮೂರು ವಿಭಾಗಗಳಲ್ಲಿ ಆಯೋಜಿಸಲಾಗುವುದು. ತಾಲೂಕು ಮಟ್ಟದ ಸ್ಪರ್ಧೆ ನ.22ರೊಳಗೆ, ಜಿಲ್ಲಾಮಟ್ಟದ ಸ್ಪರ್ಧೆ ನ.25ರೊಳಗೆ ನಡೆಯಲಿದೆ. ರಾಜ್ಯಮಟ್ಟದ ಸ್ಪರ್ಧೆ ನ.29ರಂದು ನಡೆಯಲಿದೆ ಎಂದು ಹೇಳಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಪ್ರಮುಖರಾದ ಲಕ್ಷ್ಮೀನಾರಾಯಣ ಕಾಶಿ, ಮ.ಸ.ನಂಜುಂಡಸ್ವಾಮಿ, ಶಿವಾಜಿ ಜಾಧವ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಶಿಕ್ಷಕರ ಪ್ರವಚನ, ಸಂಚಾಲಕರ ಸಭೆ
ಶಿವಮೊಗ್ಗದಲ್ಲಿ ಸೆ.9ರ ಸಂಜೆ 4ಕ್ಕೆ ಬಿ.ಎಚ್.ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು, ವಿವಿಧ ಭಜನಾ ಮಂಡಳಿಗಳ ಪ್ರಶಿಕ್ಷಕರ ಪ್ರವಚನ, ಸಂಚಾಲಕರ ಸಭೆ ನಡೆಸಲಿದ್ದಾರೆ ಎಂದು ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಜಿ. ಭಟ್ಟ ಹೇಳಿದರು. 10ರಂದು ಬೆಳಗ್ಗೆ 10.30ರಿಂದ ಜಿಲ್ಲೆಯ ಹಾಗೂ ತಾಲೂಕುಗಳ ಎಲ್ಲ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಮಂಡಳಿ ಸಭೆ ನಡೆಸುವರು. ಸಂಜೆ 4ಕ್ಕೆ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರ ಜತೆಗೆ ವರ್ಚುವಲ್ ಸಭೆ ನಡೆಸಿ ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ನೀಡುವರು. ಸಂಜೆ 6ಕ್ಕೆ ಶಂಕರ ಮಠದಲ್ಲಿ ಹಾಲಿ, ಮಾಜಿ ಶಾಸಕರ ಹಾಗೂ ಪ್ರಮುಖರ ಸಭೆ ನಡೆಸುವರು ಎಂದು ಹೇಳಿದರು.