

ಸಾಗರ: ಶಿವಮೊಗ್ಗದಲ್ಲಿ ನಡೆಯಲಿರುವ ಭಗವದ್ಗೀತೆ ಪಠಣ ಕಾರ್ಯಕ್ರಮದಲ್ಲಿ ಕನಿಷ್ಠ 25 ಸಾವಿರ ಜನರನ್ನು ಸೇರಿಸಿ, ಏಕಕಂಠದಲ್ಲಿ ಪಠಣ ಕಾರ್ಯಕ್ರಮ ರೂಪಿಸುವ ಉದ್ದೇಶವಿದೆ ಎಂದು ಭಗವದ್ಗೀತೆ ಅಭಿಯಾನ -2025ರ ರಾಜ್ಯ ಕಾರ್ಯಾಧ್ಯಕ್ಷ ಅಶೋಕ್ ಭಟ್ ಹೇಳಿದರು.
ನವೆಂಬರ್‌ನಲ್ಲಿ ನಡೆಯಲಿರುವ ಭಗವದ್ಗೀತೆ ಅಭಿಯಾನ ಅಂಗವಾಗಿ ಸಾಗರದ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಅಭಿಯಾನವನ್ನು ವಿಶೇಷವಾಗಿ ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ. ಮುಂದಿನ ಪೀಳಿಗೆಗೆ ಭಗವದ್ಗೀತೆ ಮಹತ್ವವನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಭಗವದ್ಗೀತೆ ಕುರಿತು ಮಾಹಿತಿ ಹಾಗೂ ಕಂಠಪಾಠ ಮಾಡಲು ಗುರುಗಳನ್ನು ನೇಮಿಸಲಾಗುತ್ತದೆ. ಸೆಪ್ಟೆಂಬರ್ ಅಂತ್ಯದೊಳಗೆ ಕನಿಷ್ಠ 3 ಸಾವಿರ ಜನರು ಭಗವದ್ಗೀತೆ ಕಲಿತು ಶಿವಮೊಗ್ಗದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಹಾ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಸಾಗರದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಭಗವದ್ಗೀತೆ ಅಭಿಯಾನದಲ್ಲಿ ಎಲ್ಲರೂ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು. ರಾಜ್ಯ ಸಂಪರ್ಕ ಅಭಿಯಾನದಲ್ಲಿ ಕನಿಷ್ಠ 50 ಸಾವಿರ ಜನರನ್ನು ಸೇರಿಸುವ ಉದ್ದೇಶವಿದೆ. ಸಾಗರದಿಂದ 5 ಸಾವಿರ ಮಕ್ಕಳು, ಹಿರಿಯರು ಭಗವದ್ಗೀತೆ ಕಲಿತು ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಮಿತಿಯದು ಎಂದು ಹೇಳಿದರು.
ವನ್ನಿಕುಲಂ ಕ್ಷತ್ರಿಯ ಸಮಾಜದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಮಾಜದವರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಅತಿಹೆಚ್ಚು ಜನರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸಲಾಗುವುದು ಎಂದರು.
ಭಗವದ್ಗೀತೆ ಅಭಿಯಾನ ತಾಲೂಕು ಸಮಿತಿ ಅಧ್ಯಕ್ಷರಾಗಿ ಕೆ.ವಿ.ಜಯರಾಮ್, ಉಪಾಧ್ಯಕ್ಷರಾಗಿ ಕೆ.ಎಚ್.ಶ್ರೀಪಾದ್, ಪ್ರಭಾ ವೆಂಕಟೇಶ್, ಭರತ್ ನಾಡಿಗ್, ಕಾರ್ಯದರ್ಶಿ ಕೆ.ಜಿ.ಸುರೇಶ್, ಪ್ರಧಾನ ಸಂಚಾಲಕರಾಗಿ ಜ್ಯೋತಿ ಮಣೂರು, ನೇತ್ರಾ ಉಡುಪ, ಜ್ಯೋತಿ ನಂಜುಂಡಸ್ವಾಮಿ, ಸಂಚಾಲಕರಾಗಿ ಗೋಪಿ ದೀಕ್ಷಿತ್, ಬದರಿನಾಥ್, ಈಳಿ ಶ್ರೀಧರ್, ಭಾರತಿ ವೆಂಕಟರಾಮ್, ಸತ್ಯನಾರಾಯಣ, ಸುಜಾತಾ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಮಾ.ಸ.ನಂಜುಂಡಸ್ವಾಮಿ, ಪಿ.ಪಿ.ಹೆಗಡೆ, ಕೆ.ವಿ.ಜಯರಾಮ್, ಸವಿತಾ, ಸುಜಾತಾ, ಶ್ರೀಪಾದ, ಶ್ರೀನಿವಾಸಮೂರ್ತಿ ಇತರರಿದ್ದರು.