

ಶಿವಮೊಗ್ಗ: ಬಯಲುಸೀಮೆ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯ ಈ ಬಾರಿ ಮಳೆಗಾಲದಲ್ಲೇ ಕಿಚ್ಚು ಹತ್ತಿಸಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಸಂದರ್ಭ ಬೇಸಿಗೆ ಬೆಳೆಗೆ ನೀರು ಸಿಗದಿದ್ದಾಗ ಹೋರಾಟಕ್ಕೆ ಕಾರಣವಾಗುತ್ತಿದ್ದ ಭದ್ರೆ ಈಗ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಚರ್ಚೆಯಲ್ಲಿದ್ದಾಳೆ.
ಜಲಾಶಯದ ಸನಿಹದಲ್ಲೇ ಬಲದಂಡೆ ನಾಲೆಯನ್ನು ಸೀಳಿ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕು ಸೇರಿ ಬಯಲು ಸೀಮೆಯ ಹಳ್ಳಿಗಳಿಗೆ ಜಲಜೀವನ ಮಿಷನ್ ಮೂಲಕ ಪ್ರತಿದಿನ 30 ಕ್ಯೂಸೆಕ್‌ನಂತೆ ವರ್ಷಕ್ಕೆ ಒಂದು ಟಿಎಂಸಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಬಲದಂಡೆ ನಾಲೆಯ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗ ನಾಲೆ ಸೀಳುತ್ತಿರುವ ಜಾಗ ಗುಡ್ಡಗಾಡು ಪ್ರದೇಶ. ಎತ್ತರದಿಂದ ನೀರು ವೇಗವಾಗಿ ಕೆಳಗೆ ಹರಿಯುತ್ತದೆ. ಹೀಗಾಗಿ ಬಲದಂಡೆ ನಾಲೆಯಲ್ಲಿ ಹರಿವಿನ ವೇಗ ಕಡಿಮೆಯಾಗುತ್ತದೆ. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಜಮೀನಿಗೆ ಈಗಲೇ ನಾಲೆಯಲ್ಲಿ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಹರಿವಿನ ವೇಗ ಕಡಿಮೆಯಾದರೆ ಇನ್ನೂ ಸಮಸ್ಯೆಯಾಗುತ್ತದೆ ಎಂಬುದು ರೈತರ ಆತಂಕ.
ಬಲದಂಡೆ ನಾಲೆಯಲ್ಲಿ ವರ್ಷದ 9 ತಿಂಗಳು ಮಾತ್ರ ನೀರು ಹರಿಯುತ್ತದೆ. ಉಳಿದ ಮೂರು ತಿಂಗಳು 700 ಎಚ್‌ಪಿ ಸಾಮರ್ಥ್ಯದ ಎರಡು ಮೋಟಾರ್ ಪಂಪ್‌ಸೆಟ್‌ಗಳನ್ನು ಬಳಸಿ ಜಲಾಶಯದಿಂದ ನೇರವಾಗಿ ಶುದ್ಧೀಕರಣ ಘಟಕಕ್ಕೆ ನೀರನ್ನು ಕೊಂಡೊಯ್ಯಲಾಗುತ್ತದೆ. ಬಲದಂಡೆ ನಾಳೆ ಸೀಳುವ ಬದಲು ವರ್ಷವಿಡೀ ಪಂಪ್ ಮೂಲಕ ನೇರವಾಗಿ ಶುದ್ಧೀಕರಣ ಘಟಕಕ್ಕೆ ನೀರನ್ನು ತೆಗೆದುಕೊಂಡು ಹೋಗಲಿ ಎಂಬುದು ರೈತರ ವಾದ.
ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದೊಂದು ವಾರದ ಹಿಂದೆ ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಐಐಎಸ್‌ಸಿ (ಬಾರತೀಯ ವಿಜ್ಞಾನ ಸಂಸ್ಥೆ) ತಜ್ಞರ ಮೂಲಕ ಸ್ಥಳ ಹಾಗೂ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ಪಡೆಯಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.25ರಂದು ಸ್ಥಳ ಪರಿಶೀಲನೆ ನಡೆಸಿದ್ದ ತಜ್ಞರ ತಂಡ ನಾಲೆಯನ್ನು ಸೀಳಿ ನೀರು ಕೊಂಡೊಯ್ಯಲು ಗುರುತಿಸಿರುವ ಸ್ಥಳದ ಮಣ್ಣಿನ ರಚನೆ, ತಾಂತ್ರಿಕ ಹಾಗೂ ಹೈಡ್ರಾಲಿಕ್ ಅಂಶಗಳ ಬಗ್ಗೆ ಅಧ್ಯಯನ ನಡೆಸಿತ್ತು. ಈ ಯೋಜನೆಯಿಂದ ನಾಲೆಯ ಕೊನೇ ಭಾಗದ ರೈತರಿಗೆ ಸಮಸ್ಯೆಯಾಗುವುದಿಲ್ಲ ಎಂದು ವರದಿ ನೀಡಿದೆ.