ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕ‌ ಮುಖಂಡರು ಪೊಲೀಸ್​ ವಶಕ್ಕೆ

Photo of VSIL
Published on

ಶಿವಮೊಗ್ಗ: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ ಉದ್ಘಾಟನೆಗೆ ಇಂದು ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಅವರಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ (ವಿಐಎಸ್ಎಲ್) ಕಾರ್ಖಾನೆಯ ಕಾರ್ಮಿಕ‌ ಮುಖಂಡರನ್ನು ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ವಶಕ್ಕೆ ಪಡೆಯಲಾಗಿದೆ. ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್ ಸೇರಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು, ಹೊಳೆಹೊನ್ನೂರು ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ.

ಭದ್ರಾವತಿಯ ವಿಐಎಸ್ಎಲ್ ಉಳಿಸುವಂತೆ ಪ್ರತಿಭಟನೆ ಮಾಡಲು ಕಾರ್ಮಿಕರು ನಿರ್ಧರಿಸಿದ್ದರು. ಭದ್ರಾವತಿಯಿಂದ ಸೋಗಾನೆಯ ವಿಮಾನ ನಿಲ್ದಾಣದವರೆಗೆ ರ್ಯಾಲಿ ಮಾಡಲು ನಿರ್ಧರಿಸಿದ್ದರು. ಆ ಮೂಲಕ ಕಾರ್ಖಾನೆ ಉಳಿಸಲು ಪ್ರಧಾನಿ ಮೋದಿ ಹಾಗೂ ಕೇಂದ್ರದ ಗಮನ ಸೆಳೆಯಲು ನಿರ್ಧರಿಸಿದ್ದರು. ಇದೀಗ ಮುಂಜಾಗ್ರತಾ ಕ್ರಮವಾಗಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ವಿಮಾನ ನಿಲ್ದಾಣ ಮುಂಭಾಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಬೃಹತ್ ಪೆಂಡಾಲ್​ನಲ್ಲಿ ಒಂದು ಲಕ್ಷ ಅಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು ಎರಡು ಲಕ್ಷ ಜನರು ಸೇರುವ ನೀರೀಕ್ಷೆ ಇದೆ. ಬೆಳಗ್ಗಿನಿಂದಲೇ ಜನರು ಸಮಾವೇಶದತ್ತ ಬರುತ್ತಿರುದ್ದಾರೆ. ಬೆಳಗ್ಗೆ 11.35ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಪ್ರಧಾನಿ ಮೋದಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಅವರು ಬರಮಾಡಿಕೊಳ್ಳಲ್ಲಿದ್ದಾರೆ. 25 ನಿಮಿಷಗಳ ಕಾಲ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನೆ ಸೇರಿದಂತೆ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಮಾವೇಶದ ಮೈದಾನದತ್ತ ಮೋದಿ ಬರಲಿದ್ದು, ಮಧ್ಯಾಹ್ನ 1.15 ಗಂಟೆಯವರೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ರ ವೇಳೆಗೆ ಶಿವಮೊಗ್ಗ ದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net