

ಬೆಂಗಳೂರು: ಮಹಾತ್ಮ ಗಾಂಧೀಜಿ ಕೊಂದ ಗೋಡ್ಸೆ ಅವರನ್ನು ಪೂಜಿಸುವವರು, ಆರಾಧಿಸುವವರು ದೇಶದಲ್ಲಿರುವುದು ದುರಂತ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ 2023ರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ಸರ್ಕಾರದ ಜನಪರ ಯೋಜನೆಗಳಿಗೆ ಮಹಾತ್ಮಾ ಗಾಂಧೀಜಿವರ ಚಿಂತನೆಗಳೇ ಪ್ರೇರಣೆ ಎಂದು ತಿಳಿಸಿದರು.
ಗಾಂಧೀಜಿಯವರ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು. ಅಹಿಂಸಾ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ಪಡೆಯಲು ಹೊರಟ ದೇಶವೆಂದರೆ ಭಾರತ. ಗಾಂಧಿಜೀಯವರು ದೊಡ್ಡ ಮಾನವತಾವಾದಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸ್ವಾಭಾವವನ್ನು ಬೆಳೆಸಿಕೊಳ್ಳುವ ಮೂಲಕ ಗಾಂಧೀಜಿಯವರಿಗೆ ನಿಜವಾದ ಗೌರವ ಅರ್ಪಿಸಿದಂತಾಗುತ್ತದೆ. ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನದಿಂದ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದರು.
ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕೊನೆಯವರೆಗೂ ಗಾಂಧಿ ಶ್ರಮಿಸಿದ್ದರು. ಆದರೆ ನಾಥೂರಾಂ ಗೋಡ್ಸೆಯವರ ಮತಾಂಧತೆಯಿಂದ ಅವರು ಅಸುನೀಗಿದರು. ನಾಥೂರಾಂ ಅವರನ್ನು ಪೂಜಿಸುವವರು ಈ ದೇಶದಲ್ಲಿರುವುದು ವಿಷಾದನೀಯ ಎಂದು ಹೇಳಿದರು.
ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿವರ ಚಿಂತನೆಗಳೇ ಪ್ರೇರಣೆ. ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಬಗ್ಗೆ ಗಾಂಧೀಜಿ ಅಪಾರವಾದ ಬದ್ಧತೆ ಹೊಂದಿದ್ದರು. ಮಹಿಳೆಯವರ ಅಭಿವೃದ್ಧಿಯಿಂದ ನಾಡು, ದೇಶದ ಅಭಿವೃದ್ಧಿ ಸಾಧ್ಯ ಎಂದಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ನಾಂದಿ ಹಾಡಿದೆ. ಅನ್ನಭಾಗ್ಯ ಯೋಜನೆಯೂ ಗಾಂಧಿ ತತ್ವಗಳನ್ನು ಅವಲಂಬಿಸಿವೆ ಎಂದರು.
ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ ಬದುಕಿದವರು ಎಂದು ಸಿದ್ದರಾಮಯ್ಯ ಹೇಳಿದರು.
ಧಾರವಾಡದ ಗರಗ ಕ್ಷೇತ್ರಿಯ ಸೇವಾ ಸಂಘ ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಭಾರತದ ರಾಷ್ಟ್ರಧ್ವಜ ತಯಾರಾಗಿದ್ದಾರೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾದ ಈ ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಎನ್.ಜಯರಾಮ್, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಉಪಸ್ಥಿತರಿದ್ದರು.
ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಈ ವರ್ಷ ಪ್ರಶಸ್ತಿಗಾಗಿ 18 ವ್ಯಕ್ತಿ, 12 ಸಂಸ್ಥೆ ಅರ್ಜಿ ಹಾಕಿದ್ದವು. ಅದರೆ ನಾವು ಅರ್ಜಿ ಹಾಕದೇ ಇರುವ ಸಂಸ್ಥೆ ಆಯ್ಕೆ ಮಾಡಿದ್ದೇವೆ. ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ಸವಾಲುಗಳ ನಡುವೆಯೂ ಗಾಂಧಿ ತತ್ವಾದರ್ಶಗಳನ್ನು ಸಾರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧಿ ತತ್ವ, ಆದರ್ಶ ನಶಿಸಿ ಹೋಗಿರುವುದು ದುರಂತ. ಸ್ವಾರ್ಥ, ಲಂಚ ಹೆಚ್ಚುತ್ತಿದ್ದು, ದೇಶ ಪ್ರೇಮ ಕಳೆದುಕೊಂಡಿದ್ದೇವೆ. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ನ್ಯಾ.ವೀರಪ್ಪ ಹೇಳಿದರು.
ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಈ ವರ್ಷದ ಪ್ರಶಸ್ತಿಯನ್ನು ನಮ್ಮ ಸಂಸ್ಥೆ ನೀಡಿದ್ದು, ನೂಲುವ ಮತ್ತು ನೇಯ್ಗೆ ಕಾರ್ಯಕರ್ತರಿಗೆ ಸಂದ ಗೌರವ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಖಾದಿ 1 ಮೀಟರ್ ನೇಯ್ದಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ 7 ರೂ.ಗಳಿಂದ 10 ರೂ.ಗೆ ಹೆಚ್ಚಿಸಬೇಕು. 1 ಲಡಿ ನೂಲಿಗೆ ನೀಡುವ ಪ್ರೋತ್ಸಾಹಧನ 3 ರೂ.ಗಳಿಂದ 65 ರೂ.ಗೆ ಏರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಖಾದಿ ಕೊಂಡರೆ ಮಾತ್ರ ಖಾದಿ ಉಳಿಯಬಹುದು. ಖಾದಿಯನ್ನು ತುಂಡು ಬಟ್ಟೆಯಾಗಿ ನೋಡಬೇಡಿ. ತತ್ವವಾಗಿ ನೋಡಿ ಬಳಸಲು ಮನಸ್ಸು ಮಾಡಬೇಕು. ಸರ್ಕಾರ ನಕಲಿ ಖಾದಿ ಬದಲು ಪ್ರಮಾಣಿತ ಖಾದಿ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಸವಪ್ರಭು ಹೊಸಕೇರಿ ಆಗ್ರಹಿಸಿದರು.