ಎಲ್ಲೆಂದರಲ್ಲಿ ಕಸ ಹಾಕುವವರು ಇನ್ಮುಂದೆ ಹುಷಾರ್​! ಮಹತ್ವದ ಅಪ್ಡೇಟ್​​ ಕೊಟ್ಟ DK ಶಿವಕುಮಾರ್

Bbau - 2025-11-01T132415.495
Published on

ಬೆಂಗಳೂರು: ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ‌ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು" ಎಂದು ಡಿಸಿಎಂ DK  ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಬಳಿಯ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಇರುವ ಸಮಸ್ಯೆ ಕುರಿತು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿ, "ಈಗಾಗಲೇ‌‌ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ" ಎಂದರು.

ಮುಂಬೈನಲ್ಲೂ ಕಸದ ರಾಶಿ

"ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ,‌ ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಚ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು" ಎಂದರು.

"ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ" ಎಂದರು.

ಡಾಂಬರ್ ರಸ್ತೆ ತಂತ್ರಜ್ಞಾನದ ಬಗ್ಗೆ ಆಲೋಚನೆ

"ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣವು ಹೈದರಾಬಾದ್ ಸೇರಿದಂತೆ ಇತರೆಡೆ ಮಾಡಲಾಗುತ್ತಿದೆಯಂತೆ. ಇದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ‌ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net