

ಹೊಳೆಹೊನ್ನೂರು: ಇತ್ತೀಚೆಗೆ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಮತ್ತು ವರದಕ್ಷಿಣೆ ಕಿರುಕುಳ ಹಾಗೂ ಮಕ್ಕಳ ಸಾಗಣೆ ನಡೆಯುತ್ತಿರುವುದನ್ನು ತಪ್ಪಿಸಲು ಮಹಿಳಾ ದೌರ್ಜನ್ಯ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಾದರ್ ಜೇಮ್ಸ್ ಪಾಲ್ ಹೇಳಿದರು.
ಸಮೀಪದ ಕಲ್ಲಿಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಭದ್ರಾವತಿಯ ಡಾನ್ ಬಾಸ್ಕೋ ಸಂಸ್ಥೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಪೋಷಕತ್ವ ಮಾಹಿತಿ, ಮಹಿಳಾ ದೌರ್ಜನ್ಯ ಕುರಿತು ಜಾಗೃತಿ ಹಾಗೂ ಬಡ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರುದ್ಯೋಗಿ ಯುವತಿಯರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ದೂರದ ನಗರಗಳಿಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತದೆ. ಮಹಿಳೆಯರ ಹಾಗೂ ಮಕ್ಕಳ ಕಳ್ಳಸಾಗಣೆಗೆ ಮಹಿಳೆಯರೇ ಸಹಾಯ ಮಾಡುತ್ತಿರುವುದು ಕಳವಳಕಾರಿ ಎಂದರು.
ನವೋದಯ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್, ಖಜಾಂಚಿ ರಾಜು, ಮಂಜುನಾಥ್, ದಾನಿ ಎನ್.ರಂಗನಾಥ್ ಅವರು ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್‌ಗಳನ್ನು ವಿತರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜ್, ಮುಖ್ಯಶಿಕ್ಷಕ ಸತೀಶ, ಸಹಶಿಕ್ಷಕಿ ಹೇಮಲತಾ, ವಸಂತಬಾಯಿ, ರಮೇಶ್ ತಟ್ಟೆಹಳ್ಳಿ, ಸತೀಶ್ ರೆಡ್ಡಿ ಇತರರಿದ್ದರು.