

ತ್ಯಾಗರ್ತಿ: ರೈತರು ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ವಂಚನೆ ಜಾಲಕ್ಕೆ ಬಲಿಯಾಗದೆ ಅಧಿಕೃತ ಮಾರಾಟಗಾರರಲ್ಲಿ ಮಾತ್ರ ಖರೀದಿಸಬೇಕು ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ.ಹನುಮಂತಪ್ಪ ಹೇಳಿದರು.
ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಆನಂದಪುರ ರೈತ ಸಂಪರ್ಕ ಕೇಂದ್ರದಿಂದ ಏರ್ಪಡಿಸಿದ್ದ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಮನೆಬಾಗಿಲಿಗೆ ಬಂದು ವಿವಿಧ ಕಂಪನಿಗಳ ಹೆಸರಿನಲ್ಲಿ ರಸಗೊಬ್ಬರ ಮಾರಾಟ ಮಾಡುವ ನಕಲಿ ಏಜೆಂಟರ ಬಗ್ಗೆ ರೈತರು ಎಚ್ಚರಿಕೆಯಿಂದ ಇರಬೇಕು. ರೈತರಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಬೇಕು. ಸಹಕಾರ ಸಂಘದಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ರೀತಿಯ ರಸಗೊಬ್ಬರ ಕೀಟನಾಶಕ ಕೃಷಿ ಉಪಕರಣಗಳು ದೊರೆಯುತ್ತವೆ ಎಂದರು.
ಈ ಬಾರಿ ಅವಧಿಗೂ ಮುನ್ನವೇ ಮಳೆ ಆರಂಭವಾಗಿದೆ. ರೈತರಿಗೆ ಅಗತ್ಯವಿರುವ ಕೃಷಿ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಟ್ರಾೃಕ್ಟರ್, ಟಿಲ್ಲರ್‌ಗಳ ಖರೀದಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಂಘದಿಂದ ಯಾವಾಗಲೂ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆನಂದಪುರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ್, ಪಿಎಸಿಎಸ್ ಉಪಾಧ್ಯಕ್ಷ ಕಿರಣ್, ನಿರ್ದೇಶಕರಾದ ಇಸಾಕ್, ಎಂ.ಎಲ್.ಗಣಪತಿ, ನಾಗೇಂದ್ರ, ಮಂಜುನಾಥ, ಕಾರ್ಯದರ್ಶಿ ಜೈಕುಮಾರ್ ಇತರರಿದ್ದರು.