

ಬೆಂ.ಗ್ರಾಮಾಂತರ/ಕೋಲಾರ: ಹೊಸಕೋಟೆ ತಾಲೂಕು ಬಿ.ಮಾಕನಹಳ್ಳಿ ಬಳಿ ನ.21ರಂದು ಪತ್ತೆಯಾಗಿದ್ದ ಅಪರಿಚಿತ ಶವದ ಪ್ರಕರಣ ಭೇದಿಸಿದ ನಂದಗುಡಿ ಠಾಣೆ ಪೊಲೀಸರು ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.
ಕೋಲಾರ ತಾಲೂಕು ಚಂಬೆ ಗ್ರಾಮದ ಆನಂದ್ (32) ಮೃತ. ಪತ್ನಿ ಚೈತ್ರಾ(28) ಹಾಗೂ ಪ್ರಿಯಕರ ಚಲಪತಿ (31) ಜೈಲು ಸೇರಿದ್ದು, ಇದಕ್ಕೆ ಸಹಕರಿಸಿದ ಮತ್ತೊಬ್ಬ ಅರೋಪಿ ನವೀನ್ ತಲೆಮರೆಸಿಕೊಂಡಿದ್ದಾನೆ.
ಆನಂದ್ ಹಾಗೂ ಚೈತ್ರಾ ಪ್ರೇಮವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಪಕ್ಕದ ಮನೆಯ ಚಲಪತಿ ಎಂಬುವನಿಂದ ಕಂದಕ ಏರ್ಪಟ್ಟಿತ್ತು.
ಚೈತ್ರಾಳೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಚಲಪತಿ ವಿಚಾರವಾಗಿ ಪತಿ ಆನಂದ್ ವ್ಯಗ್ರನಾಗಿದ್ದ. ಆತನೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಪತ್ನಿಗೆ ತಾಕೀತು ಮಾಡಿದ್ದ.
ಮಾಸ್ಟರ್ ಪ್ಲಾನ್: ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಮುಗಿಸಲು ಸಂಚು ರೂಪಿಸಿದ ಪತ್ನಿ 1 ಲಕ್ಷ ರೂ.ಡೀಲ್ ನೀಡಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸಹೋದರನ ಸ್ನೇಹಿತನಾಗಿದ್ದ ಮತ್ತೊಬ್ಬ ಆರೋಪಿ ನವೀನ್ ಎಂಬುವನ ಸಹಕಾರ ಕೇಳಿದ್ದ ಚೈತ್ರಾ ಪ್ರಿಯಕರ ಚಲಪತಿಯೊಂದಿಗೆ ಸೇರಿ ಕೊಲೆ ಸಂಚು ರೂಪಿಸಿದ್ದಳು.
ಆನಂದ್ನನ್ನು ಮದ್ಯದ ಪಾರ್ಟಿಗೆ ಬರುವಂತೆ ಪುಸಲಾಯಿಸಿದ ಹಂತಕರು ನೀಲಗಿರಿ ತೋಪಿಗೆ ಕರೆದೊಯ್ದು ಕಂಠಪೂರ್ತಿ ಕುಡಿಸಿ ಜಗಳ ತೆಗೆದಿದ್ದಾರೆ. ಮಾತಿನ ಚಕಮಕಿ ವೇಳೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಕಲ್ಲುಕ್ವಾರಿಗೆ ಶವ ರವಾನೆ: ಈ ಹಿಂದೆ ಕಲ್ಲುಕ್ವಾರಿಯಲ್ಲಿ ಚಾಲಕನಾಗಿದ್ದ ಕ್ರಿಮಿನಲ್ ಹಿನ್ನೆಲೆಯ ನವೀನ್ ಪ್ಲಾನ್ನಂತೆ ಬೊಲೆರೋ ವಾಹನವೊಂದರಲ್ಲಿ ಶವ ಸಾಗಿಸಿದ ಹಂತಕರು ಬಿ.ಮಾಕನಹಳ್ಳಿ ಬಳಿಯ ರ್ನಿಜನ ಪ್ರದೇಶದಲ್ಲಿರುವ ಕಲ್ಲುಕ್ವಾರಿಯಲ್ಲಿ ಶವ ಎಸೆದಿದ್ದರು.
ಟ್ಯಾಟು ಮೂಲಕ ಪತ್ತೆ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಶವದ ಕೈಮೇಲಿದ್ದ ಹಚ್ಚೆ ಗುರುತನ್ನುಫೋಟೋ ತೆಗೆದು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಿಗೂ ಹರಿಬಿಡಲಾಗಿತ್ತು. ಈ ವೇಳೆ ಮಾಸ್ತಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದ ವಿಷಯ ತಿಳಿದ ನಂದಗುಡಿ ಠಾಣೆ ಇನ್ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಪೊಲೀಸರ ತಂಡ ಶವದ ವಾರಸುದಾರರನ್ನು ಪತ್ತೆ ಹಚ್ಚಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಈಗಾಗಲೇ ಮಾಸ್ತಿ ಠಾಣೆಯಲ್ಲಿ ಚಲಪತಿ ಹಾಗೂ ಚೈತ್ರಾ ದಂಪತಿ ನಡುವಿನ ಜಗಳ, ಹಾಗೂ ಅಕ್ರಮ ಸಂಬಂಧ ಆರೋಪದ ಪ್ರಕರಣದ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪ್ರಿಯಕರನನ್ನು ವಿಚಾರಣೆ ನಡೆಸಿ ಹತ್ಯೆ ರಹಸ್ಯ
ಬಾಯಿ ಬಿಡಿಸಿದ್ದಾರೆ.
ಡಿವೈಎಸ್ಪಿ, ಉಮಾಶಂಕರ್. ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರುತು ಪತ್ತೆಹಚ್ಚಿದ ನಂತರ ಅದರ ಹಿಂದಿನ ಕೊಲೆ ಆರೋಪಿಗಳನ್ನು ನಂದಗುಡಿ ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಉಮಾಶಂಕರ್. ಡಿವೈಎಸ್ಪಿ ಹೊಸಕೋಟೆ