ಹೈಕೋರ್ಟ್‌ಗೆ ಬೆಸ್ಕಾಂ ಪ್ರಮಾಣ ಪತ್ರ - ಯಪಿಐ ವ್ಯವಸ್ಥೆ ಇಲ್ಲದ ಬಗ್ಗೆ ತರಾಟೆ

highcourt
Published on


ಬೆಂಗಳೂರು: ಡಿಜಿಟಲ್ ಸೇವೆಗಳನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಬೆಸ್ಕಾಂ ನಡೆಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ ಮುಂದಿನ 6ರಿಂದ 8 ತಿಂಗಳಲ್ಲಿ ಎಲ್ಲ ರೀತಿಯ ಶುಲ್ಕಗಳ ಪಾವತಿಗೆ ಯುಪಿಐ ಅಥವಾ ಆನ್‌ಲೈನ್ ಸೌಲಭ್ಯ ಅನುಷ್ಠಾನಕ್ಕೆ ತರುವುದಾಗಿ ಬೆಸ್ಕಾಂ, ಪ್ರಮಾಣ ಸಲ್ಲಿಸಿದೆ.


ಯುಪಿಐ ಸೌಲಭ್ಯ ಜಾರಿಗೊಳಿಸದ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದ್ದ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಪ್ರಮಾಣ ಸಲ್ಲಿಸಿದ್ದು, ಮುಂದಿನ 6ರಿಂದ 8 ತಿಂಗಳಲ್ಲಿ ಆನ್‌ಲೈನ್ ಸೌಲಭ್ಯ ಜಾರಿಗೆ ತರಲಾಗುವುದು. ಅಲ್ಲದೆ, ಆನ್‌ಲೈನ್‌ನಲ್ಲಿ ಶುಲ್ಕ ಸ್ವೀಕರಿಸಲು ಸ್‌ಟಾವೇರ್ ಮತ್ತು ಹಾರ್ಡ್‌ವೇರ್ ಅಭಿವೃದ್ಧಿ ಮಾಡಬೇಕಾಗಿದ್ದು, ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ನವೀಕರಿಸಲಾಗಿದೆ ಎಂದು ವಿವರಿಸಿದ್ದಾರೆ.


ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್, ದೇಶಾದ್ಯಂತ ದಿನಸಿ ವ್ಯಾಪಾರಿ ಕೂಡ ಅಂಗಡಿ ಮುಂದೆ ಸ್ಕ್ಯಾನರ್ ಇಟ್ಟಿದ್ದಾನೆ. ಡಿಜಿಟಲ್ ಸೇವೆಗಳನ್ನು ಜಾರಿ ಮಾಡಬೇಕು ಎಂದು ಸರ್ಕಾರ ಸೂಚಿಸುತ್ತಿದೆ. ಹೀಗಿದ್ದರೂ ಬೆಸ್ಕಾಂ ಹಿಂದಿನ ಕಾಲಕ್ಕೆ ಹೋಗಿ ನಗದು ಸಂಗ್ರಹಿಸಲು ಮುಂದಾಗಿದೆ. ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯವು ನಿಧಾನವಾಗಿತ್ತು. ಆದರೆ, ನೀವು ನಮಗಿಂತಲೂ ನಿಧಾನವಾಗಿದ್ದೀರಿ ಎಂದು ನ್ಯಾಯಪೀಠ ಟೀಕಿಸಿತು.


ವಿಚಾರಣೆ ವೇಳೆ ಹಾಜರಿದ್ದ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ, ಮಾಹಿತಿ ತಂತ್ರಜ್ಞಾನ(ಐಟಿ), ಕೌಂಟರ್‌ಗಳಲ್ಲಿ ಸ್ಕ್ಯಾನರ್ ಅನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಒದಗಿಸಬಹುದು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು. ಈ ವೇಳೆ ಅರ್ಜಿದಾರರ ಪರ ವಕೀಲರು, ಬೆಸ್ಕಾಂ ಸಲ್ಲಿಸಿದ ಆಕ್ಷೇಪಣೆಗಳಿಗೆ ಉತ್ತರಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net