

ಆಲ್ದೂರು: ನಾರಾಯಣ ಗುರುಗಳ ಆದರ್ಶ, ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರುಗಳು ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ. ಸಾಮಾಜಿಕ ಸಮಾನತೆಗಾಗಿ ಕೇರಳದಲ್ಲಿ ಸುಧಾರಣಾ ಚಳವಳಿ ನಡೆಸಿದರು ಎಂದರು.
ನಾರಾಯಣ ಗುರು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಬೇರೆ ಸಮುದಾಯಗಳು ಬೆಳೆಯಲು ಸರ್ಕಾರಗಳು ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ. ಆದರೆ ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿ ರಾಜ್ಯದಲ್ಲಿ 20ಲಕ್ಷ ಜನ ಸಂಖ್ಯೆ ಹೊಂದಿರುವ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ, ಶೈಕ್ಷಣಿಕ, ಆರ್ಥಿಕ ನ್ಯಾಯ ಸಿಕ್ಕಿಲ್ಲ. ಬೇರೆ ಸಮಾಜಗಳನ್ನು ನಿಗಮದ ಮೂಲಕ ಸದೃಢಗೊಳಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪ ಅವರು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗಮ ಸ್ಥಾಪಸಿ ಅನುದಾನ ನೀಡಲಿಲ್ಲ. ಸರಿಯಾದ ನೆಲೆಗಟ್ಟಿನಲ್ಲಿ ನಿಗಮಗಳ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನಾರಾಯಣ ಗುರು ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿಕೊಟ್ಟಿದ್ದ ಆಲ್ದೂರು ಗ್ರಾಪಂ ಮಾಜಿ ಆಧ್ಯಕ್ಷೆ ಕಮಲಾ ಬಸವೇಗೌಡ, ಮಾಜಿ ಅಧ್ಯಕ್ಷ ಎ.ಎನ್.ಲಕ್ಷ್ಮಣ , ಮಾಜಿ ಸದಸ್ಯ ನಾರಾಯಣ ಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಕುಮಾರ್, ಬಿಲ್ಲವ ಸಮಾಜದ ಅಧ್ಯಕ್ಷ ಭೋಜ ಪೂಜಾರಿ, ಉಪಾಧ್ಯಕ್ಷ ಸೀತಾರಾಂ , ನಾರಾಯಣ ಆಚಾರ್ಯ, ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ, ಗುಣಶೇಖರ್,ಆಲ್ದೂರು ವೃತ್ತ ನಿರೀಕ್ಷಕ ಸತ್ಯನಾರಾಯಣ್ ಗ್ರಾಪಂ ಸದಸ್ಯ ಕೆ.ಎಲ್ ರಾಜ್, ಭಾಸ್ಕರ್ ಪೂಜಾರಿ, ರಾಘವೇಂದ್ರ ಮತ್ತಿತರರಿದ್ದರು.