

ಜೆರುಸೆಲಂ: ಭಾರತೀಯ ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನ ಮಾಡಿದ್ದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಹಿರಿಯ ಪುತ್ರ ಯೇರ್ ನೇತನ್ಯಾಹು ಇದೀಗ ಕ್ಷಮೆ ಕೇಳಿದ್ದಾರೆ. ಟ್ವಿಟರ್ನಲ್ಲಿ ಕ್ಷಮೆ ಕೋರಿದ ಅವರು, ಜೈ ಹಿಂದ್...ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತನ್ನ ತಂದೆಯ ರಾಜಕೀಯ ನೀತಿಗಳನ್ನು ಸದಾ ಸಮರ್ಥಿಸಿಕೊಳ್ಳುವ ಯೇರ್, ಭ್ರಷ್ಟಾಚಾರ ಆರೋಪದಿಂದ ತನ್ನ ಅಪ್ಪ ಖಂಡಿತ ಮುಕ್ತರಾಗುತ್ತಾರೆ. ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ಹೇಳುವ ಭರದಲ್ಲಿ ದೇವಿ ದುರ್ಗಾಮಾತೆಯನ್ನು ಅವಮಾನಿಸಿದ್ದರು.
ಜು.26ರಂದು ಒಂದು ಮೆಮೆಯನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ದುರ್ಗಾಮಾತೆಯ ದೇಹಕ್ಕೆ ತನ್ನ ತಂದೆ ಬೆಂಜಮಿನ್ ನೇತನ್ಯಾಹು ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಪ್ರಾಸಿಕ್ಯೂಟರ್ ಲಿಯಾಟ್ ಬೆನ್ ಅರಿ ಅವರ ಫೋಟೊವನ್ನು ಅಳವಡಿಸಲಾಗಿತ್ತು. ಹಾಗೇ ದುರ್ಗಾ ದೇವಿಯ ಹಲವು ಕೈಗಳಲ್ಲಿ ಮಧ್ಯದ ಬೆರಳು (ಇದು ಅಶ್ಲೀಲ ಸಂಕೇತ) ಎತ್ತಿ ಹಿಡಿದಂತೆ ಈ ಮೆಮೆಯಲ್ಲಿ ಚಿತ್ರಿಸಲಾಗಿತ್ತು.
ಬೆಂಜಮಿನ್ ವಿರುದ್ಧ ರಾಜಕೀಯ ಪಿತೂರಿ ಮಾಡುತ್ತಿರುವವರ ವಿರುದ್ಧ ಹಾಕಿದ್ದ ಪೋಸ್ಟ್ ಇದಾಗಿತ್ತು. ತನ್ನ ತಂದೆಯ ವಿರುದ್ಧ ವಾದಿಸುತ್ತಿರುವ ವಕೀಲನನ್ನು ಹೀಯಾಳಿಸಲು ಈ ಮೆಮೆಯನ್ನು ಬಳಸಿದ್ದರು. ಆದರೆ, ಭಾರತೀಯರು ಕೆಲವರು ಇದನ್ನು ನೋಡಿ ಸಿಕ್ಕಾಪಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಟ್ವೀಟ್ ಮೂಲಕ ತಮ್ಮ ಕೋಪ ಹೊರಹಾಕಿದ್ದರು. ಇದನ್ನೂ ಓದಿ: ಪೋಸ್ಟ್ಮಾರ್ಟಮ್ಗೆ ಭರ್ಜರಿ ಲಂಚ ಕೇಳಿದ ಸರ್ಕಾರಿ ವೈದ್ಯ; ಶವಕ್ಕೆ ಅರ್ಧ ಹೊಲಿಗೆ ಹಾಕಿ ಕೊಟ್ಟ ಸಿಬ್ಬಂದಿ
ಅದನ್ನು ಗಮನಿಸಿದ ಯೇರ್ ನೇತನ್ಯಾಹು ಕೂಡಲೇ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಕ್ಷಮಿಸಿ, ಇಸ್ರೇಲ್ನ ಕೆಲವು ರಾಜಕೀಯ ವ್ಯಕ್ತಿಗಳನ್ನು ಟೀಕಿಸಲು ಈ ಮೆಮೆ ಹಾಕಿದ್ದೆ. ಬೇರೆ ಕಡೆ ವ್ಯಂಗ್ಯಾತ್ಮಕವಾಗಿ ಬಳಸಲಾಗಿದ್ದ ಈ ಮೆಮೆಯನ್ನು ತೆಗೆದುಕೊಂಡು, ಸಣ್ಣ ಬದಲಾವಣೆಗಳೊಂದಿಗೆ ಪೋಸ್ಟ್ ಮಾಡಿದ್ದೆ. ಇದು ಭಾರತೀಯರ ದೇವಿಯ ಚಿತ್ರವೆಂದಾಗಲಿ, ಹಿಂದು ದೇವಿಯೆಂದಾಗಲಿ ನನಗೆ ತಿಳಿದಿರಲಿಲ್ಲ. ಟ್ವೀಟ್ ಮಾಡಿದ ಮೇಲೆ ಕೆಲವು ಕಾಮೆಂಟ್ಗಳನ್ನು ನೋಡಿದೆ. ಅದರು ಭಾರತೀಯರ ಟ್ವೀಟ್ಗಳಾಗಿದ್ದವು. ನನಗೆ ಆಗ ನನ್ನ ತಪ್ಪಿನ ಅರ್ಥವಾಯಿತು. ಕೂಡಲೇ ಅದನ್ನು ಡಿಲೀಟ್ ಮಾಡಿದ್ದೇನೆ. ನನ್ನ ಎಲ್ಲ ಹಿಂದೂ ಸ್ನೇಹಿತರ ಬಳಿ ಕ್ಷಮೆ ಯಾಚನೆ ಮಾಡುತ್ತಿದ್ದೇನೆ ಎಂದು ಯೇರ್ ಜು.27ರಂದು ಟ್ವೀಟ್ ಮಾಡಿದ್ದಾರೆ.
ಯೇರ್ ಅವರ ಟ್ವೀಟ್ ನೋಡಿದ ಕೆಲವು ಭಾರತೀಯರಂತೂ ಕೆಂಡಾಮಂಡಲರಾಗಿ ಪೋಸ್ಟ್ ಹಾಕಿದ್ದರು. ಕೂಡಲೇ ಅದನ್ನು ತೆಗೆಯುವಂತೆ ಯೇರ್ ಅವರನ್ನು ಒತ್ತಾಯಿಸಿದ್ದರು. ಇಂದು ಕೂಡ ಯೇರ್ ಟ್ವೀಟ್ ಮಾಡಿ, ಜೈ ಹಿಂದ್...ಐ ಲವ್ ಇಂಡಿಯಾ ಎಂದಿದ್ದಾರೆ. ಅಷ್ಟೇ ಅಲ್ಲ ಇಸ್ರೇಲ್ ಮತ್ತು ಭಾರತ ಧ್ವಜವನ್ನು ಒಟ್ಟಿಗೇ ಹಾಕಿ, ಲವ್ ಸಿಂಬಲ್ ಹಾಕಿದ್ದಾರೆ. (ಏಜೆನ್ಸಿಸ್)