ವಿಡಿಯೋ ಕಾಲ್​ ಮಾಡು ನಿನ್ನ ಹೆಂಡ್ತಿ ನೋಡ್ತೀನಿ… ಒಪ್ಪದಿದ್ದಕ್ಕೆ ಚಾಕು ಇರಿತ, ಬೆಂಗ್ಳೂರಲ್ಲಿ ವಿಚಿತ್ರ ಪ್ರಕರಣ

BNG Police
Published on

ಬೆಂಗಳೂರು: ವಿಡಿಯೋ ಕಾಲ್​ ಮಾಡು ನಿನ್ನ ಹೆಂಡತಿಯನ್ನು ನೋಡುತ್ತೇನೆ ಎಂದು ಒತ್ತಾಯಿಸಿದ್ದನ್ನು ನಿರಾಕರಿಸಿದ ವ್ಯಕ್ತಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ವಿಚಿತ್ರ ಘಟನೆ ಎಚ್​ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್ ಮಿಶ್ರಾ ಎಂಬಾತನಿಗೆ ಸುರೇಶ್ ಎಂಬಾತ ಚಾಕು ಇರಿದಿದ್ದಾನೆ. ಇಬ್ಬರು ಎಚ್​ಎಸ್ಆರ್ ಲೇಔಟ್​ನ ಲೆನಿನ್ ಕಲೆಕ್ಷನ್​ ಉದ್ಯೋಗಿಗಳು. ಸೇಲ್ಸ್​ಮ್ಯಾನ್​ ಅಗಿ ಕೆಲಸ ಮಾಡುತ್ತಿದ್ದ ರಾಜೇಶ್​ ಮಿಶ್ರಾ ಜ.27ರಂದು ಸಂಜೆ 5.30ರ ಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಆರೋಪಿ ಸುರೇಶ್​, ರಾಜೇಶ್​ರನ್ನು ನೋಡಿದ್ದಾರೆ.

ರಾಜೇಶ್​ ಬಳಿ ಬಂದ ಸುರೇಶ್​, ನಿನ್ನ ಪತ್ನಿಗೆ ವಿಡಿಯೋ ಕಾಲ್​ ಮಾಡು ನಾನು ನೋಡುತ್ತೇನೆ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜೇಶ್​, ಆತನಿಗೆ ಬೈಯ್ಯುತ್ತಾರೆ. ಇದರಿಂದ ಸ್ಥಳದಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ವಾಗ್ವಾದ ತಾರಕಕ್ಕೇರಿ ತಾಳ್ಮೆ ಕಳೆದುಕೊಳ್ಳುವ ಸುರೇಶ್​, ಅಲ್ಲಿಯೇ ಇದ್ದ ಕತ್ತರಿಯಿಂದ ರಾಜೇಶ್​ ಹೊಟ್ಟೆಗೆ ಚುಚ್ಚಿದ್ದಾರೆ.

ಬಳಿಕ ಸ್ನೇಹಿತನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ನಂತರ ಆರೋಪಿ ಸುರೇಶ್​ ವಿರುದ್ಧ ರಾಜೇಶ್​ ದೂರು ದಾಖಲಿಸಿದ್ದು, ಇದೀಗ ಆರೋಪಿ ಸುರೇಶ್​ನನ್ನು ಎಚ್​ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net