

ಬೆಂಗಳೂರು: ಬೆಂಗೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾದ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ನಡುವೆ ಟೋಲ್ ಹೆಚ್ಚು ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತೀವ್ರ ವಿರೋಧದ ಬಳಿಕ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಳ ಕೈಬಿಟ್ಟಿದೆ.
ಎನ್ಹೆಚ್ಎಐ ಶೇ.22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದು ಹಳೆಯ ದರವನ್ನೇ ಮುಂದುವರೆಸಲು ಎನ್ಹೆಚ್ಎಐ ನಿರ್ಧಾರ ಮಾಡಿದೆ.
ಎಕ್ಸ್ಪ್ರೆಸ್ವೇನಲ್ಲಿ ಟೋಲ್ ದರವನ್ನು ಏಕಾಏಕಿ ಏರಿಕೆ ಮಾಡಿ, ಪರಿಷ್ಕೃತ ದರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಹಿಂದಿನ ಆದೇಶದಲ್ಲಿ ಸೂಚನೆ ನೀಡಲಾಗಿತ್ತು. ಹೆದ್ದಾರಿಯಲ್ಲಿ ಕಳೆದ ಮಾರ್ಚ್ 14ರಂದು ಶುಲ್ಕ ವಸೂಲಿಗೆ ಚಾಲನೆ ನೀಡಲಾಗಿತ್ತು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹ ಪ್ರಾರಂಭ ಆದಾಗಿನಿಂದ ದುಬಾರಿ ಶುಲ್ಕ ಎಂದು ಎಕ್ಸ್ಪ್ರೆಸ್ ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.
ಟೋಲ್ ದರ ಏರಿಕೆ ಆದೇಶ ಹಿಂಪಡೆದ ಹಿನ್ನೆಯಲ್ಲಿ ಟೋಲ್ ಸಿಬ್ಬಂದಿ ಹಳೆ ದರ ಮುಂದುವರಿಸಿದ್ದಾರೆ. ಕಾರುಗಳಿಗೆ ಸದ್ಯ ಹಳೆಯ ದರ 135 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇನ್ನೂ ಆದೇಶ ಬಂದಿಲ್ಲ ಎಂದು ಸಿಬ್ಬಂದಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಸುದ್ದಿ ಪ್ರಕಟವಾದ ಬೆನ್ನಲ್ಲೇ ಟೋಲ್ ಸಿಬ್ಬಂದಿ ಹೆಚ್ಚುವರಿ ವಸೂಲಿ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ; ಅಮಾನತ್ತು ಆದೇಶ