ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್ ರೈಲು ಘೋಷಣೆ: 30 ವರ್ಷದ ಬೇಡಿಕೆ ಈಡೇರಿಕೆ ಎಂದ ಸಂಸದ ತೇಜಸ್ವಿ ಸೂರ್ಯ

vande bharath
Published on

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದ್ದು, ಎರಡೂ ನಗರಗಳ 30 ವರ್ಷದಗಳ ಬೇಡಿಕೆ ಈಡೇರಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು ಮತ್ತು ಮುಂಬೈ ನಡುವೆ ನಾವು ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲನ್ನು ಪ್ರಾರಂಭಿಸಲಿದ್ದೇವೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಅವುಗಳ ನಿಲ್ದಾಣಗಳಲ್ಲಿನ ಸಾಮರ್ಥ್ಯದ ವಿಸ್ತರಣೆಯಿಂದಾಗಿ ಇದು ಈಗ ಸಾಧ್ಯವಾಗಿದೆ ಎಂದು ಹೇಳಿದ್ದಾರೆ ಎಂದರು.

ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್‌ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ.

ಕಳೆದ ಮೂರು ದಶಕಗಳಲ್ಲಿ ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ಸೂಪರ್‌ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಅನುಕೂಲಕರವಾಗಿಸಲಿದೆ ಎಂದು ಹೇಳಿದ್ದಾರೆ.

ಬಹುಕಾಲದ ಕನಸನ್ನು ನನಸಾಗಿಸಿದ್ದಕ್ಕಾಗಿ ಪ್ರಧಾನಿ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಸಂಸತ್ತಲ್ಲಿ ಪ್ರಯತ್ನಿಸಿದ್ದ ಸೂರ್ಯ

ಈ ವಿಷಯದ ಕುರಿತಾಗಿ ಸಂಸದ ಸೂರ್ಯ ಅವರು, ಕಳೆದ ನಾಲ್ಕು ವರ್ಷಗಳಿಂದ ಸಂಸತ್ತಿನಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗಳಲ್ಲಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನದ ಫಲವಾಗಿದೆ.

ಇದೇ ವೇಳೆ ಸಂಸದರ ಪ್ರಯತ್ನಗಳನ್ನು ಶ್ಲಾಘಿಸಿರುವ ಸಚಿವ ಅಶ್ವಿನಿ ವೈಷ್ಣವ್ ಅವರು, ಬೆಂಗಳೂರು ಮತ್ತು ಮುಂಬೈ ನಡುವಿನ ಸೂಪರ್‌ಫಾಸ್ಟ್ ರೈಲಿಗಾಗಿ ತೇಜಸ್ವಿ ಸೂರ್ಯ ಅವರ ನಿರಂತರ ಪ್ರಯತ್ನದಿಂದ ನನಗೆ ಬಹಳ ಸಂತೋಷವಾಗಿದ್ದು, ಅವರ ಪ್ರಯತ್ನಕ್ಕೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವು ಯಾವಾಗಲೂ ಬೆಂಗಳೂರಿನ ಜನರ ಪರವಾಗಿ ಹೋರಾಡಿದ್ದೀರಿ ಎಂದು ಶ್ಲಾಘಿಸಿದ್ದಾರೆ.

ವಿಮಾನ, ಬಸ್‌ಗಳಿಗೆ ಪರ್ಯಾಯ

ಈ ಹೊಸ ರೈಲು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಮಾನ ಹಾಗೂ ಬಸ್‌ಗಳಿಗೆ ಆರಾಮದಾಯಕವಾದ ಪರ್ಯಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಎರಡು ಮಹಾನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಈ ಸೇವೆಯಿಂದ ಲಕ್ಷಾಂತರ ದೈನಂದಿನ ಪ್ರಯಾಣಿಕರು, ಉದ್ಯಮ ಪ್ರಯಾಣಿಕರು ಮತ್ತು ಕುಟುಂಬಗಳಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ. ಜತೆಗೆ, ಇದು ಭಾರತದ ಎರಡು ಅತ್ಯಂತ ಕ್ರಿಯಾತ್ಮಕ ಮಹಾನಗರ ಪ್ರದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲಿದೆ. - ತೇಜಸ್ವಿ ಸೂರ್ಯ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net