

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರ ನಿಲ್ದಾಣದವರೆಗೆ ರೈಲು ಸೇವೆ ದೀಪಾವಳಿಯಂದು ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
ವಿಸ್ತರಿತ ಮಾರ್ಗದಲ್ಲಿ ನಡೆದ ವಿವಿಧ ಪ್ರಾಯೋಗಿಕ ಪರೀೆಗಳು ಯಶಸ್ವಿಯಾಗಿವೆ. ಅ.3, 4ರಂದು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ಸಂಚಾರ ಆರಂಭಿಸಲು ಅನುಮೋದನೆ ನೀಡದ್ದಾರೆ. ವಾಣಿಜ್ಯ ಸೇವೆ ಆರಂಭಿಸಲು ದಿನಾಂಕ ನಿಗದಿಗಾಗಿ ಬಿಎಂಆರ್ಸಿಎಲ್ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ನಮ್ಮ ಮೆಟ್ರೋ ಸೇವೆ ಆರಂಭ ಕುರಿತು ಸಂಸದ ಪಿ.ಸಿ. ಮೋಹನ್, 'ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಸೇವೆ ತಿಂಗಳಾಂತ್ಯದಿಂದ ಆರಂಭವಾಗುತ್ತದೆ' ಎಂದು 'ಎಕ್ಸ್' ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ವಾಣಿಜ್ಯ ಸಂಚಾರ ಆರಂಭಿಸಲು ತಯಾರಿದ್ದೇವೆ. ಶ್ರೀದಲ್ಲಿ ವಿಸ್ತರಿತ ಮಾರ್ಗ ಲೋಕಾರ್ಪಣೆ ದಿನಾಂಕ ಪ್ರಕಟವಾಗುವ ವಿಶ್ವಾಸವಿದೆ' ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಾಗಸಂದ್ರ-ಮಾದಾವರ ನಡುವಿನ 3.7 ಕಿ.ಮೀ. ಮಾರ್ಗವನ್ನು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ತೆರಳುವ ಜನರಿಗೆ, ಮಾದನಾಯಕನಹಳ್ಳಿ ಮತ್ತು ಮಾಕಳಿ ಗ್ರಾಮಗಳ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಹಸಿರು ಮಾರ್ಗದಲ್ಲಿ 29 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ವಿಸ್ತರಿತ ಮಾರ್ಗದ ಸೇರ್ಪಡೆಯಿಂದ ನಿಲ್ದಾಣಗಳ ಸಂಖ್ಯೆ 32 ಆಗಲಿದೆ. ಈ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಒಳಗೊಂಡಿದೆ.