

ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಹಿಂಸಿಸಿ ಕೊಂದ ತಂದೆ
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಆರೋಪಿ ಅರೆಸ್ಟ್
2 ದಿನ ಮನೆಯಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿದ್ದ ಉದ್ಯಮಿ ಆನಂದ್ ರಾಜ್
ಬೆಂಗಳೂರು: ಕೆಲಸ ಕೊಟ್ಟ ಮಾಲೀಕನ ಪುತ್ರಿ ಜೊತೆ ಏಕಾಂತದಲ್ಲಿದ್ದ ಉದ್ಯೋಗಿಯನ್ನು ಕಂಡು ರೊಚ್ಚಿಗೆದ್ದು, 2 ದಿನ ಚಿತ್ರ ಹಿಂಸೆ ಕೊಟ್ಟು ಕೊಂದು ಹಾಕಿದ ಘಟನೆ ಬೆಂಗಳೂರಿನ ಯಲಹಂಕ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ಪಾಲಕ್ಕಾಡ್ ಜಿಲ್ಲೆಯವನಾದ ಕಿರಣ್(23) ಮೃತನು ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದ ಆನಂದರಾಜ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆನಂದ್ ರಾಜ್ ಸ್ವೀಟ್ ಕಾರ್ನ್ ತಯಾರಿಸುವ ಯಂತ್ರಗಳ ಕುರಿತು ವರ್ಕ್ ಶಾಪ್ ನಡೆಸುತ್ತಿದ್ದರು ಎನ್ನುವ ಮಾಹಿತಿ ಇದೆ. ಯಲಹಂಕ ಬಳಿಯ ಕೋಗಿಲು ಕ್ರಾಸ್ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಕಿರಣ್ ಕಳೆದ ಕೆಲವು ವರ್ಷದ ಹಿಂದೆ ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ದ. ಆತನಿಗೆ ಆನಂದರಾಜ್, ತನ್ನ ಒಡೆತನದ ಉತ್ಪಾದನಾ ಘಟಕದಲ್ಲಿ ಕೆಲಸ ಕೊಟ್ಟಿದ್ದರು. ಕಿರಣ್ ಎಲ್ಲರ ವಿಶ್ವಾಸವನ್ನು ಗಳಿಸಿದ್ದ. 2 ವರ್ಷದಿಂದ ನೀಯತ್ತಾಗಿ ಕೆಲಸ ಮಾಡುತ್ತಿದ್ದ ಕಿರಣ್ ಎನ್ನಲಾಗಿದೆ.
ಆನಂದ್ ರಾಜ್ ಪುತ್ರಿ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ದಸರಾ ಹಬ್ಬದ ಪ್ರಯುಕ್ತ ಮನೆಗೆ ಬಂದಿದ್ದಳು. ಇದೇ ಸಮಯದಲ್ಲಿ ಕಿರಣ್ಗೆ ಆಕೆಯ ಮೇಲೆ ಪ್ರೀತಿಯಾಗಿದೆ. ಈ ಬಗ್ಗೆ ಇಬ್ಬರು ಪರಸ್ಪರ ಒಪ್ಪಿಕೊಂಡಿದ್ದರು ಎನ್ನುವುದು ಪೊಲೀಸರು ನಡೆಸಿದ ತನಿಖೆಯಿಂದ ಬಯಲಾಗಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಕಿರಣ್ ಮತ್ತು ಅವರ ಮಗಳ ನಡುವಿನ ಸಂಬಂಧದ ಬಗ್ಗೆ ಆನಂದರಾಜ್ ಅವರಿಗೆ ಇತ್ತೀಚೆಗೆ ತಿಳಿದುಬಂದಿತ್ತು. ಇವರ ಬಣ್ಣ ಬಯಲು ಮಾಡಬೇಕು ಎಂದ ಸಂಚು ರೂಪಸಿದರು. ಊರಿಗೆ ಹೋಗುತ್ತಿದ್ದೇನೆ ಎಂದು ಮಗಳಿಗೆ ಸುಳ್ಳು ಹೇಳಿ ತಮಿಳುನಾಡಿಗೆ ಹೊರಟಿದ್ದರು. ಇದನ್ನೇ ನಂಬಿದ ಆಕೆ, ಕಿರಣ್ ಅನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರು ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ತಂದೆ ಸಿಡಿದೆದ್ದಿದ್ದಾರೆ.
ಮಗಳನ್ನು ಚಿಕ್ಕಬಳ್ಳಾಪುರಕ್ಕೆ ಕಳುಹಿಸಿ, ಕಿರಣ್ನನ್ನು ಮನೆಯಲ್ಲಿಯೇ ಕೂಡಿಹಾಕಿ 2 ದಿನ ಚೆನ್ನಾಗಿ ಹಿಂಸಿಸಿದ್ದಾನೆ. ಕಿರಣ್ ಕಿಬ್ಬೊಟ್ಟೆಗೆ ಜೋರಾಗಿ ಏಟು ಬಿದ್ದ ಕಾರಣ ಅಸ್ವಸ್ಥನಾಗಿ, ಪ್ರಾಣ ಕಳೆದುಕೊಂಡಿದ್ದಾನೆ. ಇದು ತಿಳಿದಿದ್ದರೂ ಸಹ ಆನಂದ್ ರಾಜ್ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದಾರೆ. ಆದರೆ, ಅಷ್ಟರಲ್ಲಿ ಕಿರಣ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ,(ಏಜೆನ್ಸೀಸ್).