

ಬೆಂಗಳೂರು: ಹಳಸಿದ ಆಹಾರ ಸೇವನೆ ಬಳಿಕ ಅದು ವಿಷಾಹಾರ (Food Poisoning ) ವಾಗಿ 5 ವರ್ಷದ ಬಾಲಕ ಮೃತಪಟ್ಟು, ದಂಪತಿ ಅಸ್ವಸ್ಥರಾಗಿರಾಗಿದ್ದಾರೆ. ಈ ಘಟನೆ ಬೆಂಗಳೂರಿನ ( bengaluru ) ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಪಿ.ಅಗ್ರಹಾರದ ಭುವನೇಶ್ವರಿನಗರ ನಿವಾಸಿ ಧೀರಜ್ ಮೃತ ದುರ್ದೈವಿ. ಈತನ ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮೀ ಸಹ ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಡೆದಿದ್ದೇನು?: ಭಾನುವಾರ ರಾತ್ರಿ ಬಾಲರಾಜ್ ದಂಪತಿ ಹಾಗೂ ಪುತ್ರ ಧೀರಜ್ ಊಟ ಮುಗಿಸಿ ನಿದ್ದೆಗೆ ಜಾರಿದ್ದಾರೆ. ಸೋಮವಾರ ಮುಂಜಾನೆ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿ ಚೀರಾಡಲು ಶುರು ಮಾಡಿದ್ದಾರೆ. ನೆರಹೊರೆಯವರು ಕೂಡಲೇ ಮೂವರನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಧೀರಜ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ಫುಡ್ ಪಾಯ್ಸನ್‌ನಿಂದ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲರಾಜ್ ಮತ್ತು ನಾಗಲಕ್ಷ್ಮೀಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಪಿತೃಪಕ್ಷಕ್ಕೆ ಮಾಡಿದ್ದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದು, ಭಾನುವಾರ ರಾತ್ರಿ ಮೂವರೂ ಈ ಆಹಾರ ಸೇವಿಸಿದ್ದರು. ಮತ್ತೊಂದೆಡೆ ಫುಡ್ ಡೆಲವರಿ ಕೆಲಸ ಮಾಡುವ ಬಾಲರಾಜ್, ಗ್ರಾಹರೊಬ್ಬರಿಂದ ಆನ್‌ಲೈನ್‌ನಲ್ಲಿ ಕೇಕ್ ( cake ) ಆರ್ಡರ್ ಪಡೆದಿದ್ದರು. ಬಳಿಕ ಆ ಗ್ರಾಹಕ ಆರ್ಡರ್ ರದ್ದುಗೊಳಿಸಿದ ಹಿನ್ನೆಲೆ ಕೇಕ್ ಅನ್ನು ಮನೆಗೆ ತಂದು ಫ್ರಿಜ್‌ನಲ್ಲಿ ಇರಿಸಿದ್ದರು. ಭಾನುವಾರ ರಾತ್ರಿ ಊಟ ಮಾಡುವಾಗ ಪತ್ನಿ, ಪುತ್ರನ ಜತೆಗೆ ಈ ಕೇಕ್ ಸಹ ಸೇವಿಸಿದ್ದರು. ಬಳಿಕ ಮೂವರೂ ಅಸ್ವಸ್ಥರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಆಸ್ಪತ್ರೆ ವೈದ್ಯಕೀಯ ವರದಿ(ಎಂಎಲ್‌ಸಿ) ಪ್ರಕಾರ ಫುಡ್ ಪಾಯ್ಸನ್‌ನಿಂದ ಮೂವರೂ ಆಸ್ವಸ್ಥರಾಗಿದ್ದು, ಈ ಪೈಕಿ ಧೀರಜ್ ಮೃತಪಟ್ಟಿರುವುದು ಖಚಿತಪಟ್ಟಿದೆ.