ವಿಕಸಿತ ಕೃಷಿ ಸಂಕಲ್ಪದಿಂದ ಅನುಕೂಲ: ಬಿವೈಆರ್

krishi vikasit
ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಡಾ.ಆರ್.ಸಿ.ಜಗದೀಶ್, ವಿರೂಪಾಕ್ಷಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಆಧುನಿಕ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸುವುದು, ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವ ಕಾರಣದಿಂದ ಕೇಂದ್ರ ಸರ್ಕಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಜಾರಿಗೊಳಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಹೊಳಲೂರಿನಲ್ಲಿ ಗುರುವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಬಹುಮುಖ್ಯವಾಗಿ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ಬೆಳೆ ವೈವಿಧ್ಯತೆ ಮತ್ತು ಕೃಷಿ ಯಂತ್ರಗಳ ಪರಿಚಯ ಮಾಡಿಕೊಡಲಾಗುವುದು ಎಂದರು.

ರೈತರು, ಕೃಷಿ ವಿಜ್ಞಾನಿಗಳ ನೇರ ಭೇಟಿ ಮತ್ತು ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ. ರೈತರ ಆವಿಷ್ಕಾರಗಳನ್ನು ಉತ್ತೇಜಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ಮಣ್ಣು, ಆರೋಗ್ಯ ಚೀಟಿಯ ಆಧಾರದ ಮೇಲೆ ಸೂಕ್ತ ಬೆಳೆಗಳನ್ನು ಆಯ್ಕೆ ಮಾಡಲಾಗುವುದು. ಸಮತೋಲನ ರಾಸಾಯನಿಕ ಗೊಬ್ಬರ ಬಳಕೆಯನ್ನು ಉತ್ತೇಜಿಸುವುದು. ತಂತ್ರಜ್ಞಾನ ಮತ್ತು ಆಧುನಿಕ ಯಂತ್ರೋಪಕರಣಗಳ ಸಹಯೋಗದೊಂದಿಗೆ ಸ್ಮಾರ್ಟ್ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪುವಂತೆ ನೋಡಿಕೊಳ್ಳುವುದು ಈ ಅಭಿಯಾನದ ಉದ್ದೇಶ ಎಂದು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ಕುಮಾರ್, ಉಪನಿರ್ದೇಶಕಿ ಮಂಜುಳಾ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ರಮ್ಯಾ, ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net