

ಕಂಪಲಾಪುರ: ಎಷ್ಟು ದಿನ ಅಧಿಕಾರಲ್ಲಿರುತ್ತೇವೆ ಎನ್ನುವುದು ಮುಖ್ಯವಲ್ಲ. ಇರುವ ಅಧಿಕಾರವನ್ನು ಬಳಸಿಕೊಂಡು ಸಾರ್ವಜನಿಕ ಕೆಲಸಗಳನ್ನು ಮಾಡಿದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ಸೋಮವಾರ ಗ್ರಾಮದ ಬಸ್ ನಿಲ್ದಾಣದ ಬಳಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಳ ಹಂತದಲ್ಲೇ ಜನರ ಸಮಸ್ಯೆಗಳನ್ನು ಗುರುತಿಸಬೇಕು. ನಂತರ ನಮ್ಮ ಗಮನಕ್ಕೆ ತಂದಾಗ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೇವಲ ಸಣ್ಣಸಣ್ಣ ಕೆಲಸಗಳನ್ನು ಮಾಡಿಸಲು ನಮ್ಮ ಕಡೆ ಮುಖಮಾಡುವುದು ಬೇಡ ಎಂದು ಸಲಹೆ ನೀಡಿದರು.
ಈ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮವನ್ನು ದತ್ತು ತೆಗೆದುಕೊಂಡು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಗ್ರಾಮಕ್ಕೆ ಅವಶ್ಯವಿರುವ ಎಲ್ಲಾ ಕೆಲಸಗಳನ್ನು ಮುಂದೆ ಮಾಡುತ್ತೇನೆ. ಇಂತಹ ಆರ್ಥಿಕ ಕ್ರೂಢೀಕರಣದ ಕೆಲಸಗಳಿಂದ ಪಂಚಾಯಿತಿಗೆ ಆದಾಯ ಬರಲಿದೆ ಎಂದರು.
ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾದ ಪಿಯು ಕಾಲೇಜು ಆರಂಭಿಸುವ ಬಗ್ಗೆ ಸಂಬಂಧಿಸಿ ಸಚಿವರ ಜತೆ ಮಾತನಾಡಿ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಹಾಗೆಯೇ ಸೆಸ್ಕ್ ಲೈನ್ ಮನ್‌ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಸುನಿಲ್ ಕುಮಾರ್, ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬಿಇಒ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ ಸ್ವಾಮಿ , ಹಿರಿಯ ಮುಖಂಡ ಎಂ.ರಮೇಶ್, ಉದ್ಯಮಿ ಕೆ.ಪಿ.ನಿಂಗರಾಜು, ಪ್ರಕಾಶ್ ಗೌಡ, ಪಿಡಿಒ ಪರಮೇಶ್, ಕಾರ್ಯದರ್ಶಿ ಸುಷ್ಮಾ , ಸುಮಿತ್ರಾ , ಅಧ್ಯಕ್ಷೆ ಜಾನಕಿ ವೆಂಕಟರಾಮ್, ಉಪಾಧ್ಯಕ್ಷೆ ಸುಮಾ ಶಿವು ಮತ್ತಿತರರಿದ್ದರು.