

ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಉದ್ದೇಶಿತ ವಿಧಾನ ಮಂಡಲದ ಚಳಿಗಾಲ ಅಧಿವೇಶನ ಒಂದು ದಿನ ಮೊಟಕುಗೊಂಡಿದೆ. ಡಿ.9 ರಿಂದ 20ರವರೆಗೆ ನಿಗದಿಯಾಗಿದ್ದ ಅಧಿವೇಶನ 19ರವರೆಗೆ ಮಾತ್ರ ನಡೆಯಲಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20ರಿಂದ ಆರಂಭವಾಗಿ 22ರವರೆಗೆ ನಡೆಯಲಿದೆ. ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಚಿವರು ಪಾಲ್ಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ.
ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಹೀಗಾಗಿ ಅತ್ಯಂತ ಉಮೇದಿಯಿಂದಲೇ ವಿಧಾನ ಮಂಡಲ ಅಧಿವೇಶನ ಎದುರಿಸಲು ಸಜ್ಜಾಗಿದೆ.
ವಕ್ಫ್ ಮಂಡಳಿ ವಿವಾದ, ಮುಡಾ ನಿವೇಶನಗಳ ಹಂಚಿಕೆ ಅಕ್ರಮ, ಅಬಕಾರಿ ಕಮಿಷನ್ ವಸೂಲಿ, ವರ್ಗಾವಣೆ ದಂಧೆಗೆ ಅಧಿಕಾರಿಯೊಬ್ಬ ಆತ್ಮಹತ್ಯೆ, ಅಭಿವೃದ್ಧಿ ಕೆಲಸಗಳು ಸ್ಥಗಿತ ಮುಂತಾದ ವಿಷಯ ಮುಂದಿಟ್ಟು ಸರ್ಕಾರದ ಕೈಕಟ್ಟಿ ಹಾಕಲು ಪ್ರತಿಪಕ್ಷಗಳು ಉತ್ಸಾಹದಿಂದ ಸನ್ನದ್ಧವಾಗಿವೆ.
ಈ ಮಧ್ಯೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ಧಿ ಸೇರಿ ಪ್ರಮುಖ ಯೋಜನೆಗಳ ಚರ್ಚೆ, ಪರಿಹಾರಕ್ಕೆ ವೇದಿಕೆಯಾಗಬೇಕು. ರಾಜಕೀಯ ಮೇಲಾಟ, ಕೆಸರೆರಚಾಟ ಕಡಿಮೆಯಾಗಬೇಕು ಎಂದು ಉತ್ತರ ಕರ್ನಾಟಕದ ಜನರು ನಿರೀಕ್ಷಿಸಿದ್ದಾರೆ.