ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ, ಮಸ್ಕಿ ಉಪ ಚುನಾವಣೆಗೆ ದಿನಾಂಕ ಪ್ರಕಟ

22122020 Raichur GP Election
Published on

ನವದೆಹಲಿ: ರಾಜ್ಯದ ಬೆಳಗಾವಿ ಲೋಕಸಭೆ ಹಾಗೂ ಬಸವ ಕಲ್ಯಾಣ, ಮಸ್ಕಿ ವಿಧಾನಸಭೆ ಉಪ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಈ ಮೂರೂ ಕ್ಷೇತ್ರಗಳಿಗೆ ಏಪ್ರೀಲ್ 17 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.

ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಶಾಸಕರಾಗಿದ್ದ ಬಿ ನಾರಾಯಣರಾವ್ ನಿಧನದಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇನ್ನು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಪ್ರತಾಪ್​ಗೌಡ ಪಾಟೀಲ ಅವರಿಂದ ಕ್ಷೇತ್ರ ತೆರವಾಗಿತ್ತು. ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಆಯೋಗ ಪ್ರಕಟಿಸಿಲ್ಲ.

ಈಗ ಈ ಮೂರೂ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಅಧಿವೇಶನ ಮೊಟಕು?

ಬೆಂಗಳೂರು: ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿರುವುದರಿಂದ ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಪೂರ್ವ ನಿರ್ಧರಿತ ವೇಳಾಪಟ್ಟಿ ಪ್ರಕಾರ ಮಾ.31ರವರೆಗೂ ಕಲಾಪ ನಡೆಯುವುದೆಂದ ವೇಳಾಪಟ್ಟಿ ನಿಗದಿಯಾಗಿತ್ತು. ಉಪ ಚುನಾವಣೆ ಕಾರಣಕ್ಕೆ ಕಲಾಪವನ್ನು ಮಾ.26ಕ್ಕೆ ಅಂತಿಮಗೊಳಿಸುವ ಕುರಿತು ವಿಚಾರ ವಿನಿಮಯ ನಡೆದಿದೆ ಎಂದು ತಿಳಿದುಬಂದಿದೆ. ಬಜೆಟ್ ಮೇಲಿನ ಚರ್ಚೆಯನ್ನು ಶುಕ್ರವಾರದೊಳಗೆ ಮುಗಿಸಿ ಸೋಮವಾರ ಮುಖ್ಯಮಂತ್ರಿಯವರು ಉತ್ತರ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಚರ್ಚೆ ನಡೆದಿತ್ತು. ಮಾ.22ರಿಂದ 26ವರೆಗೆ ವಿವಿಧ ವಿಧೇಯಕಗಳು ಮತ್ತು ಸರ್ಕಾರಿ ಕಾರ್ಯಕಲಾಪ ಮಾಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net