ಬೆಕ್ಕಿನಕಲ್ಮಠ ಮಲೆನಾಡಿನ ಅನುಭವ ಮಂಟಪ

bekkina kalmatt programme
ಶಿವಮೊಗ್ಗ ಬೆಕ್ಕಿನ ಕಲ್ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅವರಿಗೆ ಅಲ್ಲಮಪ್ರಭು ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಸಿದ್ಧವೀರ ಸ್ವಾಮೀಜಿ, ಶ್ರೀ ಸಿದ್ಧವೃಷಬೇಂದ್ರ ಸ್ವಾಮೀಜಿ, ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಎಂ.ಬಿ.ಪಾಟೀಲ್, ಪ್ರಕಾಶ್ ಗಿರಿಮಲ್ಲವರ, ಶಾರದಾ ಪೂರ‌್ಯಾನಾಯ್ಕ, ಡಿ.ಎಸ್.ಅರುಣ್, ಎಚ್.ಎಂ.ಚಂದ್ರಶೇಖರಪ್ಪ, ಆರ್.ಎಂ.ಮಂಜುನಾಥ ಗೌಡ, ಆಯನೂರು ಮಂಜುನಾಥ ಇದ್ದರು.
Published on

ಶಿವಮೊಗ್ಗ: ಲಿಂಗಾಯತರು ಮಾತ್ರವಲ್ಲದೆ ಎಲ್ಲ ಸಮುದಾಯದ ಪ್ರೀತಿಗೆ ಒಳಗಾಗಿರುವ ಆನಂದಪುರದ ಬೆಕ್ಕಿನಕಲ್ಮಠವು ಮಲೆನಾಡು ಭಾಗದಲ್ಲಿ ನಿಜವಾದ ಅನುಭವ ಮಂಟಪ ಎಂದು ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬಣ್ಣಿಸಿದರು.

ನಗರದ ಬೆಕ್ಕಿನಕಲ್ಮಠದಲ್ಲಿ ಜಗದ್ಗುರು ಗುರುಬಸವ ಮಹಾಸ್ವಾಮಿಗಳವರ ಸ್ಮರಣೋತ್ಸವ ಸಮಿತಿ ಮತ್ತು ಭಕ್ತ ಮಂಡಳಿಯಿಂದ ಆಯೋಜಿಸಿದ್ದ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 113ನೇ ಪುಣ್ಯಸ್ಮರಣೋತ್ಸವ ಮತ್ತು ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಬೆಕ್ಕಿನಕಲ್ಮಠದ ಇತಿಹಾಸವನ್ನು ಗಮನಿಸಿದಾಗ 12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಶ್ರೇಷ್ಠ ಸಿದ್ಧಾಂತವನ್ನು ಹೊಂದಿದ್ದು ಕಾಯಕದ ಮೂಲಕ ಎಲ್ಲರನ್ನೂ ಸೇರಿಸಿಕೊಂಡು ಅನುಭವ ಮಂಟಪವನ್ನು ಮರು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು ಎಂದರು.

ದೇವರಿಗೂ ಕನ್ನಡ ಕಲಿಸಿದವರು ವಚನಕಾರರು. ಬಸವಾದಿ ಶರಣರು ಜನರ ಬಳಿಗೆ ಹೋಗಿ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ, ಮೇಲು-ಕೀಳು ಭಾವನೆಗಳನ್ನು ಕಿತ್ತೊಗೆದು ಸಾಮಾಜಿಕ ಕ್ರಾಂತಿ ಮಾಡಿದ್ದರು. ಆ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಅಡಿಪಾಯ ಹಾಕಿಕೊಟ್ಟಿದ್ದರು. ಕಲ್ಯಾಣ ಕ್ರಾಂತಿ ಬಳಿಕ ಎಲ್ಲರಿಗೂ ಆಶ್ರಯ ಕೊಟ್ಟಿದ್ದು ಬೆಕ್ಕಿನ ಕಲ್ಮಠ. ಶ್ರೀಮಠವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದರು.

ಪರಮತಪಸ್ವಿ ಗುರುಬಸವ ಶ್ರೀಗಳಿಗೆ ಹಾನಗಲ್ ಶ್ರೀಗಳ ಬಗ್ಗೆ ವಿಶೇಷ ಕಾಳಜಿ ಇತ್ತು. ಭಕ್ತರನ್ನು ಪೋಷಿಸುವ ಕೆಲಸವನ್ನು ಗುರುಬಸವ ಶ್ರೀಗಳು ಅಂದೇ ಮಾಡಿದ್ದರು. ಅವರ ಹಾದಿಯಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮುನ್ನಡೆಯುತ್ತಿದ್ದಾರೆ. ಮಠಾಧೀಶರ ಪರಿಷತ್ ಮಾಡಿಕೊಂಡು ಸಮುದಾಯದ ಸೇವೆ, ಯುವಜನರನ್ನು ದುಶ್ಚಟಗಳಿಂದ ದೂರವಿಡಲು ಶ್ರೀಗಳು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಶರಣ ಸಮ್ಮೇಳನ ಕುರಿತು ಬೆಳಗಾವಿ ಸಾಹಿತಿ ಪ್ರಕಾಶ್ ಗಿರಿಮಲ್ಲವರ ಪ್ರಧಾನ ಉಪನ್ಯಾಸ ನೀಡಿದರು. ಅಲ್ಲಮಪ್ರಭು ಪ್ರಶಸ್ತಿಯನ್ನು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅವರಿಗೆ ಪ್ರದಾನ ಮಾಡಲಾಯಿತು. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಳಗೊಪ್ಪ ಕೂಡಲಿ ಮಠದ ಶ್ರೀ ಸಿದ್ಧವೀರ ಸ್ವಾಮೀಜಿ, ಜಡೆ ಸಂಸ್ಥಾನಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಬೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಶಾಸಕಿ ಶಾರದಾ ಪೂರ್ಯಾನಾಯ್ಕ, ಎಂಎಲ್ಸಿ ಡಿ.ಎಸ್.ಅರುಣ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮುಖಂಡ ಎಚ್.ಸಿ.ಯೋಗೇಶ್, ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಡಾ. ಸಿ.ರೇಣುಕಾರಾಧ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net