

ಮನುಷ್ಯ ಹೆಚ್ಚಿನ ಭಯಪಡುವುದು ಸಾವಿಗೆ, ಮುಪ್ಪಿಗೆ ಹಾಗೂ ರೋಗಕ್ಕೆ. ಅದರ ಭಯವನ್ನು ಪರಿಹರಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ದೇವರು. ದೇವರ ಶರಣಾಗತಿಯೇ ಬದುಕಿಗೊಂದು ಚೈತನ್ಯವನ್ನು ನೀಡಬಲ್ಲುದು. ಹೇಗೆ ಸಮುದ್ರದ ಮುಂದೆ ನಿಂತರೆ ತನ್ನನ್ನೇ ತಾನು ಮರೆಯುವಂತೆ ದೇವರ ಮುಂದೆ ನಿಂತಾಗ ಅವನನ್ನು ಅವನೇ ಮರೆಯುವನು. ಮಹತ್ ಶಕ್ತಿಯ ಎದುರು ಅವನ ಅಸ್ತಿತ್ವವೇ ಮೌನವಾಗುವುದು.
‘ಅಲ್ಪ ಬುದ್ಧಿಯವರು ದೇವತೆಗಳನ್ನು ಪೂಜಿಸುತ್ತಾರೆ. ಅವರು ಪಡೆವ ಫಲವು ಮಿತವಾದದ್ದು ಮತ್ತು ಅಲ್ಪ ಕಾಲದ್ದು. ದೇವತೆಗಳನ್ನು ಪೂಜಿಸುವವರು ದೇವತೆಗಳ ಲೋಕಕ್ಕೆ ಹೋಗುತ್ತಾರೆ. ಆದರೆ ನನ್ನ ಭಕ್ತರು ಕಡೆಗೆ ನನ್ನ ಪರಮ ಲೋಕವನ್ನು ಮುಟ್ಟುವರು.’ (ಅನ್ತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಂ | ದೇವಾನ್ ದೇವಯಜೋ ಯಾನ್ತಿ ಮದ್ಭಕ್ತಾ ಯಾನ್ತಿ ಮಾಮಪಿ ||
ಭ.ಗೀ.: 7.23) ಕೊನೆಯ ಕ್ಷಣದಲ್ಲಿ ಯಾರನ್ನು ಸ್ಮರಿಸುವರೋ ಅದನ್ನೇ ಹೊಂದುವನು. ಅಜಮಿಳ, ಜಡಭರತರು ಇದಕ್ಕೆ ಸುಂದರ ಉದಾಹರಣೆ. ಯಾವ ದೇವರನ್ನು ಯಾತಕ್ಕಾಗಿ ಪೂಜಿಸುವರೋ ಅವರು ಅದನ್ನೇ ಪಡೆಯುವರು.
ಇಲ್ಲಿ ಗೊಂದಲವಿದೆ. ದೇವರೇಕೆ ಭಕ್ತರ ಹೊಗಳುವಿಕೆ ಹಾಗೂ ಅನನ್ಯಭಕ್ತಿಯನ್ನು ಇಷ್ಟಪಡುತ್ತಾನೆ? ಅವನಿಗೆ ಶರಣರಾದವರನ್ನಷ್ಟೇ ಏಕೆ ಉದ್ಧರಿಸುವನು? ಆದರೆ ದೇವರು ಪ್ರೀತಿಸುವುದು ಹೃದಯದ ವಾಸ್ತವವನ್ನು. ಅವಳಿ-ಜವಳಿ ಮಕ್ಕಳನ್ನು ಹೆತ್ತ ತಾಯಿ ಅಳುವ ಮಗುವಿಗೆ ಮಾತ್ರ ಹಾಲು ಕುಡಿಸುವಳು. ಅದರರ್ಥ ಇನ್ನೊಂದು ಮಗುವನ್ನು ಕಂಡರೆ ಆಗದು ಎಂದೇ? ತಾಯಿ ಹಾಲನ್ನು ಉಣ್ಣಿಸುವುದು ಪ್ರೀತಿಯಿಂದ ಅಲ್ಲ, ಎದೆನೋವನ್ನು ತೀರಿಸಿಕೊಳ್ಳುವುದಕ್ಕೆ ಎಂದು ಬಹಳ ತಿಳಿದವರು ವಾದಿಸುವರು. ಹೀಗೆ ವಾದಿಸಿದರೆ ನಾವು ನಾಸ್ತಿಕತೆಯ ಕಡೆಗೆ ವಾಲುತ್ತೇವೆ.
33 ಕೋಟಿ ದೇವತೆಗಳಿದ್ದಾರೆ. ಹಾಗಿದ್ದರೂ ‘ನನ್ನ ಭಕ್ತರು ನನ್ನನ್ನೇ ಸೇರುವರು’ ಎನ್ನುವುದಕ್ಕೆ ಏನು ಅರ್ಥ? ಉಳಿದ ದೇವತೆಗಳಿಗೂ ಇವನಿಗೂ ಸಂಬಂಧವೇ ಇಲ್ಲವೇ? ನರವ್ಯೂಹದಲ್ಲಿ ಅಸಂಖ್ಯಾತ ನರಗಳಿವೆ. ಮಿದುಳಿಗೆ ಸಂವೇದನೆಯನ್ನು ನೀಡುವ ಈ ನರಗಳ ಪಾತ್ರವನ್ನು 33 ಕೋಟಿ ದೇವತೆಗಳಿಗೆ ಹೋಲಿಸಲಾಗುವುದು. ಮಿದುಳಿನಿಂದ ಹೊರಡುವ ಸಂವೇದನೆ ಒಂದೇ! ಆ ಮಹಾಮಸ್ತಿಷ್ಕವನ್ನು, ಎಲ್ಲವನ್ನೂ ನಿಯಂತ್ರಿಸುವ ದೇವರಿಗೆ ಹೋಲಿಸುವರು. ದೇಹದ ಅಂಗಗಳು ಭಿನ್ನ-ಭಿನ್ನವೆಂದು ಅವು ದೇಹದ ಅಂಗಗಳೇ ಅಲ್ಲವೆಂದು ಹೇಳಲು ಸಾಧ್ಯವೇ? ಅವುಗಳ ಕಾರ್ಯಗಳು ಭಿನ್ನ-ಭಿನ್ನವಾದರೂ ಅವೆಲ್ಲ ದೇಹಕ್ಕೆ ಸಂಬಂಧಿಸಿದವೇ ಅಲ್ಲವೇ? ಆದುದರಿಂದ ಸಹಸ್ರಾರಕ್ಕೆ ಉನ್ನತ ಸ್ಥಾನ.
ನಾಸ್ತಿಕತೆ ಆಸ್ತಿಕತೆಯ ತಾಯಿ. ಆಸ್ತಿಕತೆಯು ನಾಸ್ತಿಕತೆಯ ತಾಯಿ. ನಾಸ್ತಿಕನಾಗಿರಲೂ ಆತ್ಮಶಕ್ತಿ ಬೇಕು. ಹಲವು ದೇವರನ್ನು ನಂಬಿ ದೇವಸಾನ್ನಿಧ್ಯವನ್ನು ಪಡೆಯಲೂ ಆತ್ಮಶಕ್ತಿ ಬೇಕು. ಆಸ್ತಿಕನು ಒಂದೊಂದೇ ಮೆಟ್ಟಿಲನ್ನು ಹತ್ತಲೂ ಏಕಾಗ್ರತೆ ಬೇಕು. ಹತ್ತಿದ ಮೆಟ್ಟಿಲಿನಿಂದ ಪತನವಾಗದಂತೆ ನೋಡಿಕೊಳ್ಳಬೇಕು. ಆಸ್ತಿಕನಿಗೂ ಕಾಣದ ದೇವರನ್ನು ನಂಬಲು ಒಂದು ಶಕ್ತಿ ಬೇಡವೇ? ಅದ್ವೈತದ ಮೂಲ ನಿರಾಕಾರ. ನಿರಾಕಾರವನ್ನು ಆರಾಧಿಸುವುದು ಅಷ್ಟು ಸುಲಭವಲ್ಲ! ಅದರ ಮೂಲದಲ್ಲಿ ಒಂದು ಆಕಾರವನ್ನು ಪೂಜಿಸುವ ಆವಶ್ಯಕತೆ ಇದೆ. ಆದಿಶಂಕರಾಚಾರ್ಯರು ತಾವು ಸ್ಥಾಪಿಸಿದ ದೇವಾಲಯಗಳಲ್ಲಿ ಆಕಾರಯುತ ಮೂರ್ತಿಯನ್ನೇ ಸ್ಥಾಪಿಸಿದರು.
ಪುರಿ ಪೂರ್ವಭಾರತದ ಒಡಿಶಾರಾಜ್ಯದಲ್ಲಿದೆ. ಪೂರ್ವದಲ್ಲಿ ಪುರಿ ಪೀಠ. ಇಲ್ಲಿರುವುದು ಗೋವರ್ಧನನ ಪೂಜೆ. ಋಗ್ವೇದವನ್ನು ಕಾಪಾಡಿಕೊಂಡು ಬಂದ ಮಠ. ಐತರೇಯ ಉಪನಿಷತ್ತಿನ ‘ಪ್ರಜ್ಞಾನಂ ಬ್ರಹ್ಮ’ ಇಲ್ಲಿನ ಮಹಾವಾಕ್ಯ. ಪಶ್ಚಿಮದಲ್ಲಿ ದ್ವಾರಕಾಪೀಠ. ಗುಜರಾತ್ನಲ್ಲಿದೆ. ‘ತತ್ತ್ವಮಸಿ’ ಇಲ್ಲಿನ ಮಹಾವಾಕ್ಯ. ಸಾಮವೇದವೇ ಇಲ್ಲಿ ಪ್ರಮುಖ. ಇದನ್ನು ಸ್ವರ್ಗದ ದ್ವಾರವೆಂದು ಕರೆಯುವರು. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬದರಿ ಪೀಠವಿದೆ. ಶಿವ ಇಲ್ಲಿನ ಆರಾಧ್ಯದೈವ. ‘ಅಯಮಾತ್ಮಾ ಬ್ರಹ್ಮ’ ಇಲ್ಲಿನ ಮಹಾವಾಕ್ಯ. ಅಥರ್ವವೇದವನ್ನು ಕಾಪಾಡಿಕೊಂಡು ಬಂದಿದೆ. ಚಿಕ್ಕಮಂಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ನಡುವೆ ಶೃಂಗೇರಿ ಪೀಠವಿದೆ. ಬೃಹದಾರಣ್ಯಕ ಉಪನಿಷತ್ತಿನ ‘ಅಹಂ ಬ್ರಹ್ಮಾಸ್ಮಿ’ ಇಲ್ಲಿನ ಮಹಾವಾಕ್ಯ. ಆದಿಶಂಕರರ ದಕ್ಷಿಣಾಮೂರ್ತಿಸ್ತೋತ್ರದಲ್ಲಿ ಗಮನೀಯ ಶ್ಲೋಕವಿದೆ.
ಚಿತ್ರಂ ವಟತರೋಮೂಲೇ ಶಿಷ್ಯಾ ವೃದ್ಧಾಃ ಗುರುರ್ಯುವಾ |
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ ||
‘ವಿಚಿತ್ರ ಸಂಗತಿ ಎಂದರೆ, ಆಲದ ಮರದ ಕೆಳಗೆ ವೃದ್ಧ ಶಿಷ್ಯರೂ ಮತ್ತು ಯುವಕನಾದ ಗುರುವೂ ಕುಳಿತಿದ್ದಾರೆ. ಗುರುವಿನ ಮೌನವೇ ವ್ಯಾಖ್ಯಾನವಾಗಿದೆ. ಅದರಿಂದಲೇ ಶಿಷ್ಯರ ಸಂಶಯಗಳೆಲ್ಲ ಪರಿಹಾರವಾಗುತ್ತಿದೆ.’ ಮೌನ ಸಂಶಯಗಳನ್ನು ಬಗೆ ಹರಿಸುತ್ತದೆ. ಆದರೆ ಮಾತಿಗಿಂತ ಮೌನವೇ ಸಮಸ್ಯೆಗಳನ್ನು ಪರಿಹರಿಸುತ್ತದೆ.