ಪ್ರಧಾನಿ ಕಾರ್ಯಕ್ರಮದಲ್ಲಿ ನಿತೀಶ್​ ವಿಚಿತ್ರ ವರ್ತನೆ; ಅವರ ಮಾನಸಿಕ ಸ್ಥಿತಿ ಕುರಿತು ಅನುಮಾನ ವ್ಯಕ್ತಪಡಿಸಿದ Tejashwi Yadav

Tejashwi Yadav
Published on

Tejashwi Yadav: ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ವರ್ಚುವಲ್​ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಶಿಸ್ತಿನ ವರ್ತನೆ, ಅವರ ಮಾನಸಿಕ ಆರೋಗ್ಯ ಮತ್ತು ಸರ್ಕಾರ ನಡೆಸುವ ಸಾಮರ್ಥ್ಯದ ಬಗ್ಗೆ ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ (ಅ 5) ಆರೋಪಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಬಿಹಾರ ವಿಧಾನಸಭೆಯ ವಿಪಕ್ಷ ನಾಯಕ ಯಾದವ್, ನವದೆಹಲಿಯಲ್ಲಿ ನಡೆದ ಸಮಾರಂಭಕ್ಕೆ ಸಿಎಂ ನಿತೀಶ್​​ ಕುಮಾರ್​ ತಮ್ಮ ನಿವಾಸದಿಂದಲೇ ವರ್ಚುವಲ್ ಆಗಿ ಭಾಗವಹಿಸಿದ್ದರು. ಮುಖ್ಯಮಂತ್ರಿಯ ಈ ಮಾನಸಿಕ ಸ್ಥಿತಿಗೆ ಅವರ ಆಪ್ತ ಸಹಾಯಕರು ಕಾರಣರಾಗಬಹುದೇ, ಕೆಲವು ನಾಯಕರು ತಮ್ಮ ಖಜಾನೆ ತುಂಬಿಸಿಕೊಳ್ಳಲು ಮುಖ್ಯಮಂತ್ರಿಗಳ ಮುಖವನ್ನು ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, ಅನೇಕ ದಿನಗಳಿಂದ ಮುಖ್ಯಮಂತ್ರಿಗಳು ಉತ್ತಮ ಮನಸ್ಥಿತಿಯಲ್ಲಿಲ್ಲ ಎಂದು ತೋರಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಮಹಿಳೆಯರ ಜೊತೆಗೆ, ನನ್ನ ತಾಯಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ರಾಷ್ಟ್ರಗೀತೆ ನುಡಿಸುತ್ತಿರುವಾಗ ಅವರ ಮೂರ್ಖತನ ಕ್ಯಾಮೆರಾದಲ್ಲಿ ಸೆರೆಯಾಗಿದೆ, ನಿನ್ನೆ ನಾವು ಅವರ ಅನಿಯಮಿತ ವರ್ತನೆಗೆ ಮತ್ತೊಂದು ಉದಾಹರಣೆಯನ್ನು ನೋಡಿದ್ದೇವೆ ಎಂದು ಆರ್‌ಜೆಡಿ ನಾಯಕ ಹೇಳಿದರು.

15 ವರ್ಷಗಳ ಕಾಲ ಬಿಹಾರವನ್ನು ಲಾಲು ಪ್ರಸಾದ್ ಮತ್ತು ನಂತರ ರಾಬ್ರಿ ದೇವಿ ಆಳಿದಾಗ ಕಾನೂನುಬಾಹಿರತೆ ಮತ್ತು ಭ್ರಷ್ಟಾಚಾರ ಮಿತಿಮೀರಿತ್ತು ಎಂದು ಆರೋಪಿಸಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಕುರಿತ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ, ಬಿಜೆಪಿ 20 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ಹಂಚಿಕೊಳ್ಳುತ್ತಿದೆ. ಅದು ಸಾಧಿಸಿದ್ದು ಕಡಿಮೆ ಮತ್ತು ಭವಿಷ್ಯದ ಬಗ್ಗೆ ಯಾವುದೇ ದೃಷ್ಟಿಕೋನವಿಲ್ಲ. ಆದ್ದರಿಂದ, ಅದು ತನ್ನ ವಿರೋಧಿಗಳನ್ನು ದೂಷಿಸುತ್ತಿದೆ ಎಂದು ಉತ್ತರಿಸಿದರು.

ತೇಜಸ್ವಿ ಪೋಸ್ಟ್​..

ಮುಖ್ಯಮಂತ್ರಿಗಳು ತಮ್ಮ ಸರ್ಕಾರವನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಒಂದು ಸಿಂಡಿಕೇಟ್ ಅವರ ಮೇಲೆ ದಾಳಿ ನಡೆಸುತ್ತಿದೆ ಮತ್ತು ಅದು ಶೀಘ್ರದಲ್ಲೇ ಬಹಿರಂಗಗೊಳ್ಳುತ್ತದೆ ಎಂದು ಯಾದವ್ ಹೇಳಿದರು.

ತೇಜಸ್ವಿ ಯಾದವ್​ ಆರೋಪಕ್ಕೆ ತಿರುಗೇಟು ನೀಡಿರುವ ಎಂಎಲ್‌ಸಿ, ಜೆಡಿಯು ವಕ್ತಾರ ನೀರಜ್ ಕುಮಾರ್, ಬಿಹಾರದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆರೋಗ್ಯವನ್ನು ಪುನಃಸ್ಥಾಪಿಸಿದವರು ನಿತೀಶ್ ಕುಮಾರ್. ತೇಜಸ್ವಿ ಯಾದವ್ ಅವರು ತಮ್ಮ ಅನಾರೋಗ್ಯ ಪೀಡಿತ ತಂದೆ ಲಾಲು ಪ್ರಸಾದ್ ಬಗ್ಗೆ ಚಿಂತಿಸುವುದು ಒಳ್ಳೆಯದು ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net