

ಗುಜ್ರಾನ್‌ವಾಲಾ: ಹಲವು ಮಿಲಿಯನೇರ್‌ಗಳು ಮತ್ತು ಕೋಟ್ಯಾಧಿಪತಿಗಳಿಗೂ ಮುಜುಗರ ತರುವಂತಹ ವಿಚಿತ್ರ ಘಟನೆ ಇದು ಎಂದರೆ ಖಂಡಿತ ತಪ್ಪಾಗಲಾರದು. ಚಿನ್ನ, ದೊಡ್ಡ ಬಂಗಲೆ, ನೂರಾರು ಎಕರೆ ಜಮೀನು, ಆಸ್ತಿ-ಪಾಸ್ತಿ ಇದ್ದರೂ ಸಹ ಸಾವಿರಾರೂ ಮಂದಿಗೆ ಭೂರಿ ಭೋಜನ ಹಾಕಿಸಲು ಹಿಂದೆ ಮುಂದೆ ಯೋಚಿಸುವ ಶ್ರೀಮಂತರ ನಡುವೆ ಇಲ್ಲೊಂದು ಭಿಕ್ಷುಕನ ಕುಟುಂಬ ಬರೋಬ್ಬರಿ 20 ಸಾವಿರ ಜನಕ್ಕೆ ಮಾಂಸದೂಟ ಹಾಕಿಸಿದ್ದಲ್ಲದೇ, ಅವರಿಗೆ ಪ್ರಯಾಣದ ಹೊರೆ ಕಡಿತಗೊಳಿಸಲು 2 ಸಾವಿರಕ್ಕೂ ಹೆಚ್ಚು ಕಾರಿನ ವ್ಯವಸ್ಥೆಯನ್ನು ಮಾಡಿದ ಘಟನೆ ಇದೀಗ ನೆಟ್ಟಿಗರ ಹುಬ್ಬೇರಿಸಿದೆ.
ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿ ಭಿಕ್ಷುಕನ ಕುಟುಂಬವು ಸುಮಾರು 20,000 ಜನರಿಗೆ ಭರ್ಜರಿ ಔತಣವನ್ನು ಏರ್ಪಾಡು ಮಾಡಿದ್ದು, ಅದಕ್ಕಾಗಿ ಸುಮಾರು 1.25 ಕೋಟಿ ರೂ. ಹಣವನ್ನು ವ್ಯಯಿಸಿದೆ. ತಮ್ಮ ಪ್ರೀತಿಯ ಅಜ್ಜಿಯ 40ನೇ ದಿನದ ನೆನಪಿನ ಹಿನ್ನಲೆ ಕುಟುಂಬವು ಕಾರ್ಯವನ್ನು ಬಹಳ ಜೋರಾಗಿ ಆಯೋಜಿಸಿತ್ತು. ತಮ್ಮ ಮನೆಗೆ 20,000 ಜನರನ್ನು ಆಹ್ವಾನಿಸಿದ ಕುಟುಂಬ, ಅತಿಥಿಗಳು ತಮ್ಮ ತಮ್ಮ ಸ್ಥಳಕ್ಕೆ ಸುರಕ್ಷಿತವಾಗಿ ಹಾಗೂ ಆರಾಮದಾಯಕವಾಗಿ ತಲುಪಲು 2,000 ಕಾರುಗಳನ್ನು ವ್ಯವಸ್ಥೆ ಮಾಡಿರುವುದಾಗಿ ವರದಿಯಾಗಿದೆ.
ಹಲವು ಸ್ಥಳಗಳಿಂದ ಭಿಕ್ಷುಕನ ಮನೆಗೆ ಬಂದ ಜನರು, ಅಲ್ಲಿ ವ್ಯವಸ್ಥೆ ಮಾಡಲಾಗಿದ್ದ ಭೂರಿ ಭೋಜನವನ್ನು ಸವಿದು, ತೃಪ್ತರಾಗಿದ್ದಾರೆ. ಕಾರ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ವಿಡಿಯೋ ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೃಶ್ಯ ನೋಡಿ ನಿಬ್ಬೆರಗಾದ ನೆಟ್ಟಿಗರು, ಜೀವನದಲ್ಲಿ ಇವರು ಭಿಕ್ಷುಕರಾದರು ಹೃದಯದಲ್ಲಿ ಶ್ರೀಮಂತರು ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).