

ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವುದು ಒತ್ತಟ್ಟಿಗಿರಲಿ. ಬಿಜೆಪಿ ಕಿತ್ತು ಹೋಗುವುದನ್ನು ಮೊದಲಿಗೆ ತಡೆಯಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ನೂತನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಲೆಳೆದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಆಳುವ ಪಕ್ಷಕ್ಕೊಂದು ಕೇಳುವ ಪಕ್ಷವಿರುವುದು ಪ್ರಜಾಪ್ರಭುತ್ವ ಹೆಚ್ಚಿಸುತ್ತದೆ. ಆರು ತಿಂಗಳ ನಂತರ ಕೊನೆಗೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಕರ್ನಾಟಕದ ಗೌರವ ಹೆಚ್ಚಿಸಿದ ಬಿಜೆಪಿಗೆ ಧನ್ಯವಾದ ! ಎಂದು ತಿವಿದರು.
ಬಿಜೆಪಿಯಲ್ಲೀಗ ಎರಡನೇ ಚಾಪ್ಟರ್ ಶುರುವಾಗಿದೆ. ಅದು, ಪಕ್ಷಕ್ಕೆ ಮುಳುವಾಗುವ ಮುನ್ನವೇ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲಿ, ಜನರ ಮುಂದೆ ವಸ್ತುಸ್ಥಿತಿ ಮಂಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲೆಸೆದರು.
ಈ ಹಿಂದೆ ಸಿಎಂ ಹುದ್ದೆ ಎರಡು ಸಾವಿರ ಕೋಟಿ ರೂ.ಗೆ ಬಿಕರಿಯಾಗಿದೆ ಎಂದಿದ್ದ ಯತ್ನಾಳ್ ಅವರೇ ಪ್ರತಿಪಕ್ಷ ನಾಯಕನ ಆಯ್ಕೆಗೆ ಮುನ್ನ ಏಜೆಂಟ್ ಒಬ್ಬರು ಭೇಟಿಯಾಗಿದ್ದರು ಎಂದು ಹೇಳಿದ್ದು, ಏಕೆ ಭೇಟಿಯಾದರು. ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕನ ಹುದ್ದೆ ಎಷ್ಟಕ್ಕೆ ಸೇಲಾಯಿತು ಎಂಬುದನ್ನೂ ತಿಳಿಸಬೇಕು ಎಂದು ಪರೋಕ್ಷವಾಗಿ ಆರೋಪಿಸಿದರು.
ವಿದ್ಯುತ್ ಕಳ್ಳತನ ಪ್ರಕರಣದ ವಿಷಯಾಂತರಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದು, ಹತಾಶೆಯ ಹೇಳಿಕೆ ಮುಂದುವರಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಜೆಡಿಎಸ್‌ನ ಅನೇಕ ಶಾಸಕರು ವರ್ಗಾವಣೆ, ಬಡ್ತಿ ಮುಂತಾದ ಆಡಳಿತಾತ್ಮಕ ಕಾರಣಗಳಿಗೆ ಶಿಾರಸು ಪತ್ರಗಳನ್ನು ಕಳುಹಿಸಿದ್ದು, ಅವನ್ನೆಲ್ಲ ವರ್ಗಾವಣೆ ದಂಧೆ ಎನ್ನಲು ಸಾಧ್ಯವೆ ? ಎಂದು ಪ್ರಶ್ನಿಸಿದರು.
ಒಂದೇ ಹೆಸರಿನವರು ಅನೇಕರಿರುವುದು ಸ್ವಾಭಾವಿಕ. ವಿವೇಕಾನಂದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ವಸ್ತುಸ್ಥಿತಿ ಮಾಹಿತಿ ನೀಡಿದ್ದಾರೆ. ಆದರೂ ಮಾಜಿ ಶಾಸಕ ಯತೀಂದ್ರ ಅವರ ಮೇಲೆ ಆರೋಪ ಮಾಡುವುದನ್ನು ಜೆಡಿಎಸ್ ನಾಯಕ ನಿಲ್ಲಿಸಿಲ್ಲ.
ದೇವೇಗೌಡರ ಪ್ರಧಾನಿಯಾದಾಗ ಕುಮಾರಸ್ವಾಮಿ ಹೇಗೆ ಕೆಲಸ ಮಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಪುತ್ರ ಯಾವುದೇ ಶಾಸನಾತ್ಮಕ ಸ್ಥಾನಮಾನ ಇಲ್ಲದಿದ್ದರೂ ಯಾವ ರೀತಿ ಕೆಲಸ ಮಾಡಿದರು ಎಂಬುದು ಜನರಿಗೆ ಗೊತ್ತಿದೆ.
ಯತೀಂದ್ರ ಅವರ ಬಗೆಗಿನ ಕಾಳಜಿ, ಪ್ರೀತಿಯಲ್ಲಿ ಒಂದಿಷ್ಟನ್ನಾದರೂ ಜೆಡಿಎಸ್ ಶಾಸಕರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ತೋರಿಸಬೇಕು. ಇಲ್ಲವಾದರೆ ಪಕ್ಷದ ಶಾಸಕರ ಸಂಖ್ಯೆ 19 ರಿಂದ 10ಕ್ಕೆ ಇಳಿದರೂ ಅಚ್ಚರಿಯಿಲ್ಲವೆಂದು ಪ್ರಿಯಾಂಕ್ ಖರ್ಗೆ ಕಟಕಿಯಾಡಿದರು.