ಕುಖ್ಯಾತ ಪಾತಕಿ ವಿಕಾಸ್​ ದುಬೆ ಬಂಧನಕ್ಕೂ ಮುನ್ನ 8 ಪೊಲೀಸರ ವರ್ಗಾವಣೆ

vikas dubey1
Published on

ನವದೆಹಲಿ: ಕುಖ್ಯಾತ ಪಾತಕಿ ವಿಕಾಸ್​ ದುಬೆ ಬಂಧನದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದೆಲ್ಲ ಟೀಕಿಸಲಾಗುತ್ತಿದೆ. ಆದರೆ, ಉತ್ತರ ಪ್ರದೇಶ ಸರ್ಕಾರ ಮಾತ್ರ ವಿಕಾಸ್​ ದುಬೆಯ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿತ್ತು ಎಂದೇ ಹೇಳಬಹುದಾಗಿದೆ. ಅದಕ್ಕೆ ಈ ಘಟನೆಯೇ ಸಾಕ್ಷಿ.

ವಿಕಾಸ್​ ದುಬೆ ಎಲ್ಲಿದ್ದಾನೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದಂತೆ ತೋರುತ್ತದೆ. ಆದ್ದರಿಂದ, ಆತನ ಇರುವಿಕೆಯ ಬಗ್ಗೆ ಪೊಲೀಸ್​ ಅಧಿಕಾರಿಗಳಿಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಮಧ್ಯಪ್ರದೇಶ ಸರ್ಕಾರದೊಂದಿಗೆ ಈ ವಿಷಯವನ್ನು ಹಂಚಿಕೊಂಡು, ಆತನ ಬಂಧನಕ್ಕೆ ಸಹಕಾರ ಕೇಳಿತ್ತು ಎನ್ನಲಾಗಿದೆ.

ಈ ಕಾರಣದಿಂದಾಗಿ ಮಧ್ಯಪ್ರದೇಶ ಸರ್ಕಾರ ಉಜ್ಜೈನ್​ನ ಮಹಾಕಾಲ ಪೊಲೀಸ್​ ಠಾಣೆಯ ಮುಖ್ಯಸ್ಥ ಸೇರಿ 8 ಪೊಲೀಸ್​ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿತ್ತು ಎನ್ನಲಾಗಿದೆ. ಆತನನ್ನು ಬಂಧಿಸಲು ತೆರಳುವಾಗ ಈ ಬಗ್ಗೆ ಆತನಿಗೆ ಮಾಹಿತಿ ನೀಡುವ ಆತಂಕದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿತ್ತು ಎನ್ನಲಾಗಿದೆ.

ಇದಕ್ಕೂ ಮುನ್ನ ಮಧ್ಯಪ್ರದೇಶ ಪೊಲೀಸರ ಬಂಧನದಲ್ಲಿರುವ ಕುಖ್ಯಾತ ಪಾತಕಿ ಕಾನ್ಪುರದಲ್ಲಿ ತನ್ನ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ ಎಂಬ ಬಗ್ಗೆ ಪೊಲೀಸ್​ ಅಧಿಕಾರಿಗಳಿಂದಲೇ ಮಾಹಿತಿ ಸಿಕ್ಕಿತ್ತು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಕೂಡ ಅದು ಪುನಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದ್ದಾಗಿ ಹೇಳಲಾಗಿದೆ.

ವಕೀಲರ ಕಾರಿನಲ್ಲಿ ಪ್ರಯಾಣ: ಕಾನ್ಪುರದಿಂದ ಪರಾರಿಯಾಗಿದ್ದ ವಿಕಾಸ್​ ದುಬೆ ಉಜ್ಜೈನ್​ ತಲುಪಲು ವಕೀಲರೊಬ್ಬರ ಕಾರನ್ನು ಬಳಸಿದ್ದ ಎಂಬುದು ಇದೀಗ ಬಹಿರಂಗವಾಗಿದೆ. ಲಖನೌ ನಿವಾಸಿಯಾದ ವಕೀಲ ಮನೋಜ್​ ಯಾದವ್​ ಅವರ ಪುತ್ರನ ಹೆಸರಿನಲ್ಲಿ ಈ ಕಾರು ನೋಂದಾಯಿಸಲ್ಪಟ್ಟಿದೆ. ಮೂರು ರಾಜ್ಯಗಳ ಸರಹದ್ದನ್ನು ದಾಟಿ ವಿಕಾಸ್​ ದುಬೆ ಉಜ್ಜೈನ್​ ತಲುಪಿದ್ದ ಎನ್ನಲಾಗಿದೆ. ಇದೀಗ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net