

ನವದೆಹಲಿ: ಲಾಕ್ಡೌನ್ ಕಾಲದಲ್ಲಿ ಎಲ್ಲವೂ ಸ್ಥಬ್ದವಾಗಿತ್ತು. ಆದರೆ, ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ಬಂದೆರಗಿತ್ತು ಎಂದರೆ ನಂಬಲೇಬೇಕು....!
ಸಾಮಾನ್ಯವಾಗಿ ಮಾರ್ಚ್ನಿಂದ ಮೇ ವರೆಗಿನ ಅವಧಿಯನ್ನು ಜೇನು ಸಾಕಣೆದಾರರು ಶುಷ್ಕ ಅವಧಿ ಅಥವಾ ಅಷ್ಟೊಂದು ಜೇನು ಪಡೆಯಲಾಗದ ಕಾಲಮಾನ ಎಂದೇ ಪರಿಗಣಿಸುತ್ತಾರೆ. ಆದರೆ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಅಂದರೆ ಶೇ.30ರಿಂದ 40ರವರೆಗೆ ಹೆಚ್ಚು ಜೇನು ಸಂಗ್ರಹಿಸಿದ್ದಾಗಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಲಾಕ್ಡೌನ್.
ಕಳೆದ ಮೂರು ತಿಂಗಳಿನಿಂದ ಉಂಟಾಗಿದ್ದ ಮಾಲಿನ್ಯರಹಿತ ವಾತಾವರಣ ಹಾಗೂ ಕ್ರಿಮಿನಾಶಕಗಳ ಸಿಂಪಡನೆ ಇಲ್ಲದಿರುವುದು ಹಾಗೂ ಪ್ರಶಾಂತ ಪರಿಸರ ಜೇನು ನೊಣಗಳ ಚಟುವಟಿಕೆಯನ್ನು ಇಮ್ಮಡಿಸಿದೆ. ಇದರಿಂದಾಗಿ ಜೇನು ಸಂಗ್ರಹ ಹೆಚ್ಚಾಗಿದೆ ಎನ್ನುವುದು ತಜ್ಞರ ಅಭಿಮತ.
ಹಿಮಾಚಲ ಪ್ರದೇಶ, ಉತ್ತರಪ್ರದೇಶ ಹಾಗೂ ಕಾಶ್ಮೀರದಲ್ಲಿ ಜೇನು ಸಾಕಣೆಗೆ ತೋಟಗಳನ್ನು ಮಾಡಿಕೊಂಡಿರುವ ವಿಜಯ್ ಕಸನಾ ಕೂಡ ಇದನ್ನೇ ಹೇಳುತ್ತಾರೆ. ಈ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಜೇನು ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ವಿನಯ್ಕುಮಾರ್ ಕೂಡ ಇದನ್ನು ಅನುಮೋದಿಸುತ್ತಾರೆ. ಉಳಿದ ಅವಧಿಯಲ್ಲಿ ಪ್ರತಿ ಜೇನು ಪೆಟ್ಟಿಗೆಯಿಂದ 15ರಿಂದ 20 ಕೆಜಿ ಸಂಗ್ರಹವಾದರೆ, ಲಾಕ್ಡೌನ್ ಅವಧಿಯಲ್ಲಿ ಈ ಪ್ರಮಾಣ 30ರಿಂದ 40 ಕೆಜಿಗೆ ಏರಿತ್ತು ಎನ್ನುತ್ತಾರೆ.
ಜೇನು ಸಾಕಣೆ ಪ್ರಮುಖವಾಗಿರುವ ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ್ ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಈ ವಿದ್ಯಮಾನ ಗಮನಿಸಲಾಗಿದೆ.
ಭಾರತದಲ್ಲಿ 207-18ನೇ ಸಾಲಿನಲ್ಲಿ 1.05 ಲಕ್ಷ ಮೆಟ್ರಿಕ್ ಟನ್ ಜೇನು ಉತ್ಪಾದಿಸಲಾಗಿದ್ದು, ಈ ಬಾರಿ ಇದು ಹೆಚ್ಚಳವಾಗುವ ಸಂಭವವಿದೆ.